ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಪುತ್ರಿ ಮರಿಯಂ ದೇಶಕ್ಕೆ ಹಿಂದಿರುಗಿದ ನಂತರ ಬಂಧನ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತು ಅವರ ರಾಜಕೀಯ ಉತ್ತರಾಧಿಕಾರಿಯಾಗಿರುವ ಪುತ್ರಿ ಮರ್ಯಮ್ ಅವರನ್ನು ಕಳೆದ ರಾತ್ರಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಜುಲೈ ೨೫ರಂದು ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅವರು ಪಾಕಿಸ್ತಾನಕ್ಕೆ ಹಿಂದಿರುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮುಸ್ಲಿಂ ಲೀಗ್‌ನ ಮುಖ್ಯಸ್ಥರೂ ಆಗಿರುವ ನವಾಜ್ ಶರೀಫ್ ಮತ್ತು ಮರ್ಯಮ್ ಅಬುದಾಬಿಯಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಪೊಲೀಸರು ಬಂಧಿಸಿದರು.
ಶರೀಫ್ ಅವರ ಪತ್ನಿ ಕುಲ್ಸುಂ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೂ ಮೊದಲು ಶರೀಫ್ ಅವರು ಲಂಡನ್‌ನಿಂದ ಯುಎಐಗೆ ತೆರಳಿದ್ದರು.
ಶರೀಫ್ ಮತ್ತು ಅವರ ಪತ್ನಿಯನ್ನು ಪೊಲೀಸರು ಬಂಧಿಸಿ ರಾವಲ್ಪಿಂಡಿಯ ಅದಿಯಾಲ ಜೈಲಿಗೆ ಕಳುಹಿಸಲಾಗಿದೆ ಎಂದು ಪಿ.ಎಂ.ಎಲ್ ವಕ್ತಾರ ಮರಿಯಂ ಔರಂಗಜೇಬ್ ತಿಳಿಸಿದ್ದಾರೆ.
ಲಂಡನ್‌ನಲ್ಲಿ ೪ ದುಬಾರಿ ಫ್ಯ್ಲಾಟ್ ಖರೀದಿಗೆ ನೀಡಿದ ಹಣದ ಬಗ್ಗೆ ದಾಖಲೆ ಒದಗಿಸಲು ಶರೀಫ್ ಅವರು ಭ್ರಷ್ಟಾಚಾರ ತಡೆ ನ್ಯಾಯಾಲಯದಲ್ಲಿ ಜುಲೈ ೬ರಂದು ವಿಫಲರಾಗಿದ್ದರು ಮಾತ್ರವಲ್ಲ ಅವರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿತ್ತು. ಮರಿಯಂ ನವಾಜ್ ಅವರ ಪತಿ ಮೊಹಮ್ಮದ್ ಸಫ್ದರ್ ಅವರನ್ನೂ ಕೂಡ ಅದಿಯಾಲ ಜೈಲಿಗೆ ಕಳುಹಿಸಲಾಗಿದೆ.
ಜುಲೈ ೨೫ ರಂದು ನಡೆಯುವ ಚುನಾವಣೆಯಲ್ಲಿ ಅವರು ಭಾಗವಹಿಸುವ ಸಾಧ್ಯತೆ ಕ್ಷೀಣಿಸಿದೆ. ತಮ್ಮ ಪಕ್ಷಕ್ಕೆ ಹೆಚ್ಚಿನ ಬಲ ತಂದುಕೊಡುವ ಉದ್ದೇಶದಿಂದ ಅವರು ದೇಶಕ್ಕೆ ಮರಳಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶರೀಫ್ ಅವರ ಪುತ್ರಿಯ ಆಗಮನಕ್ಕೆ ಸಂಬಂಧಿಸಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ರ‍್ಯಾಲಿಯ ವೇಳೆ ಪೊಲೀಸರು ಮತ್ತು ಪಿಎಂಎಲ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ೫೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಭದ್ರತೆಗೆ ಸಂಬಂಧಿಸಿದಂತೆ ಕನಿಷ್ಠ ೬೦೦ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.