ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ೨ ದಿನಗಳ ಕಾಲ ಉತ್ತರ ಪ್ರದೇಶ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ.

ಪ್ರಧಾನಮಂತ್ರಿ ನರೇಂದ್ರಮೋದಿ ಇಂದಿನಿಂದ ೨ ದಿನಗಳ ಕಾಲ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇಂದು ಅವರು  ವಾರಣಾಸಿ, ಅಜಂಘಡ ಮತ್ತು ಮಿರ್ಜಾಪುರ ಜಿಲ್ಲೆಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪ್ರಧಾನಿ ಮೋದಿ ಇಂದು ಅಜಂಘಡದಲ್ಲಿ ೩೪೦ ಕಿಲೋ ಮೀಟರ್ ಉದ್ದದ ಪೂರ್ವಾಂಜಲ್ ಎಕ್ಸ್‌ಪ್ರೆಸ್ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ಬಾರಬಂಕಿ, ಅಮೇಥಿ, ಸುಲ್ತಾನ್‌ಪುರ್, ಫೈಝಾಬಾದ್, ಅಂಬೇಡ್ಕರ್ ನಗರ, ಅಜಂಘಡ್, ಮಾವ್ ಮತ್ತು ಗಾಜಿಯಾಬಾದ್ ಸೇರಿದಂತೆ ಹಾಗೂ ಪೂರ್ವ ಉತ್ತರ ಪ್ರದೇಶದ ಪ್ರಮುಖ ನಗರಗಳು ಐತಿಹಾಸಿಕ ಪಟ್ಟಣಗಳೊಂದಿಗೆ ಅಲ್ಲಿನ ರಾಜಧಾನಿ ಲಕ್ನೋಕ್ಕೆ ನೇರ ಸಂಪರ್ಕ ದೊರಕಲಿದೆ. ಈ ಯೋಜನೆ ಪೂರ್ಣಗೊಂಡರೆ, ನೋಯ್ಡಾದ ಮೂಲಕ ಉತ್ತರ ಪ್ರದೇಶದ ಹಲವು ನಗರಗಳು ಮತ್ತು ಪಟ್ಟಣಗಳು ರಾಷ್ಟ್ರ ರಾಜಧಾನಿ ನವದೆಹಲಿಗೆ ನೇರ ಸಂಪರ್ಕ ದೊರಕುತ್ತದೆ.

ವಾರಣಾಸಿಯಲ್ಲಿ ೯೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸವನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ. ಇದೇ ವೇಳೆ ಪ್ರಧಾನಿಯವರು ವಾರಣಾಸಿ ನಗರ ಅನಿಲ ವಿತರಣಾ ಯೋಜನೆ ಮತ್ತು ವಾರಣಾಸಿ-ಬಲ್ಲಿಯಾ ಇಎಂಯು ರೈಲು ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಮತ್ತು ನಮಾಮಿ ಗಂಗೆ ಯೋಜನೆಯಡಿ ಪಂಚಕೋಷಿ ಪರಿಕ್ರಮ ಮಾರ್ಗ ಮತ್ತು ಇತರ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಕನ್ವೆಂಷನ್ ಸೆಂಟರ್‌ಗೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇರಿ ಕಷಿ ಎಂಬ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಮಿರ್ಜಾಪುರ್‌ಗೆ ಭೇಟಿ ನೀಡಲಿದ್ದು, ಬನ್ಸಾಗರ್ ಕಾಲುವೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆ ಈ ಪ್ರಾಂತ್ಯದಲ್ಲಿ ನೀರಾವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದ್ದು, ಮಿರ್ಜಾಪುರ ಮತ್ತು ಅಲಹಾಬಾದ್ ಜಿಲ್ಲೆಗಳ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.

ಇದೇ ವೇಳೆ ಮಿರ್ಜಾಪುರ್ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಸಮಾರಂಭ ನೆರವೇರಿಸಲಿದ್ದು, ಆ ಬಳಿಕ ವಾರಣಾಸಿ ಮತ್ತು ಮಿರ್ಜಾಪುರ್ ಸಂಪರ್ಕ ಕಲ್ಪಿಸುವ ಚುನಾರ್, ಬಲುಘಾಟ್ ನ ಗಂಗಾನದಿ ಸೇತುವೆ ಬಳಿ ರಾಜ್ಯ ಸರ್ಕಾರದ ೧೦೮ನೇ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.