ಫೇಸ್‌ಬುಕ್‌ನಿಂದ ಭಾರತೀಯರ ವೈಯಕ್ತಿಕ ಮಾಹಿತಿ ಅಕ್ರಮ ಸೋರಿಕೆ ಆರೋಪ ಪ್ರಕರಣ; ಕೇಂಬ್ರಿಡ್ಜ್ ಅನಲಿಟಿಕಾ ವಿರುದ್ಧ ಸಿಬಿಐನಿಂದ ಪ್ರಾಥಮಿಕ ತನಿಖೆ ಆರಂಭ

ಫೇಸ್‌ಬುಕ್‌ನಿಂದ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸೋರಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಬ್ರಿಟಿಷ್ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಡ್ಜ್ ಅನಲಿಟಿಕಾ ಮತ್ತು ಗ್ಲೋಬಲ್ ಸೈನ್ಸ್ ರಿಸರ್ಚ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದೆ. ಕೇಂದ್ರ ಸರ್ಕಾರದಿಂದ ಈ ಕುರಿತು ಬಂದಿರುವ ಸೂಚನೆಯನ್ನು ಆಧರಿಸಿ ಈ ಕಾರ‍್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆರೋಪಗಳ ಕುರಿತು ಎಫ್‌ಐಆರ್ ಮೂಲಕ ಸಮಗ್ರ ತನಿಖೆ ನಡೆಸುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರಿಯಲು ಸಾಮಾನ್ಯವಾಗಿ ಸಿಬಿಐ ಪ್ರಾಥಮಿಕ ತನಿಖೆ ನಡೆಸುವ ಕೆಲಸವನ್ನು ಮೊದಲು ಮಾಡುತ್ತದೆ. ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿ ಕಳೆದ ತಿಂಗಳು ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದ್ದರು. ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಈ ಹಿಂದೆ ೨೦೧೬ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‌ಗೆ ನೆರವಾಗಲು ೮೭ ಮಿಲಿಯನ್ ಫೇಸ್‌ಬುಕ್ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಬಳಕೆ ಮಾಡಿಕೊಂಡಿದ್ದ ಆರೋಪ ಎದುರಿಸಿತ್ತು. ಆ ಮಾಹಿತಿ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ, ಕಳೆದ ಮಾರ್ಚ್, ಎಪ್ರಿಲ್‌ನಲ್ಲಿ  ಐ.ಟಿ. ಸಚಿವಾಲಯ ಆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಫೇಸ್‌ಬುಕ್ ಮತ್ತು ಕೇಂಬ್ರಿಡ್ಜ್ ಅನಲಿಟಿಕಾ ಸಂಸೆಗಳಿಗೆ ನೋಟಿಸ್ ನೀಡಲಾಗಿತ್ತು. ವೈಯಕ್ತಿಕ ಮಾಹಿತಿ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ತನ್ನ ಆಂತರಿಕ ವ್ಯವಸ್ಥೆಯನ್ನು ಬಲವರ್ಧನೆ ಮಾಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದ್ದಾಗಿ ರವಿಶಂಕರ್ ಪ್ರಸಾದ್ ಹೇಳಿದ್ದರು. ಆದರೆ ಕೇಂಬ್ರಿಡ್ಜ್ ಅನಲಿಟಿಕ , ಭಾರತೀಯರ ದತ್ತಾಂಶ ಸೋರಿಕೆ ಮಾಡಿಲ್ಲ ಎಂದು ಆರಂಭಿಕ ಪ್ರತಿಕ್ರಿಯೆ ನೀಡಿತ್ತು. ನಂತರದ ಪತ್ರಗಳಿಗೆ ಅದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಅದು ಭಾರತೀಯರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.