೨.ಶನಿವಾರ ಆರಂಭವಾಗಲಿರುವ ಸ್ವಚ್ಛತಾ ಹಿ-ಸೇವಾ ಅಭಿಯಾನದ ಭಾಗವಾಗಿ ಸ್ವಚ್ಛಭಾರತ್ ನಿರ್ಮಾಣದ ಪ್ರಯತ್ನಗಳನ್ನು ಬಲಗೊಳಿಸುವಂತೆ ಜನತೆಗೆ ಪ್ರಧಾನಮಂತ್ರಿ ಮನವಿ.

ಸ್ವಚ್ಛಭಾರತ್ ನಿರ್ಮಾಣದ ಪ್ರಯತ್ನಗಳನ್ನು ಬಲಗೊಳಿಸುವ ಉದ್ದೇಶದಿಂದ ಶನಿವಾರ ಆರಂಭಿಸಲಾಗುವ ಸ್ವಚ್ಛತಾ ಹಿ-ಸೇವಾ ಅಭಿಯಾನದ ಒಂದು ಭಾಗವಾಗುವಂತೆ ಪ್ರಧಾನಮಂತ್ರಿ ನರೇಂದ್ರಮೋದಿ ಜನತೆಗೆ ಕರೆ ನೀಡಿದ್ದಾರೆ. ಇದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರಿಗೆ ಸಲ್ಲಿಸುವ ಅಮೂಲ್ಯ ಶ್ರದ್ಧಾಂಜಲಿ ಆಗುತ್ತದೆ ಎಂದು ಅವರು ಹಲವಾರು ಟ್ವೀಟ್ ಮತ್ತು ವಿಡಿಯೋ ಸಂದೇಶಗಳಲ್ಲಿ ತಿಳಿಸಿದ್ದಾರೆ. ಬರುವ ಅಕ್ಟೋಬರ್ ೨ಕ್ಕೆ ಗಾಂಧೀಜಿ ಅವರ ೧೫೦ನೇ ಜಯಂತಿ ಕಾರ್ಯಕ್ರಮಗಳಿದ್ದು, ಸ್ವಚ್ಛ ಭಾರತದ ಬಾಪುಜಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿನ ಐತಿಹಾಸಿಕ ಸ್ವಚ್ಛಭಾರತ್ ಅಭಿಯಾನಕ್ಕೆ ಅಂದಿಗೆ ೪ ವರ್ಷಗಳು ಪೂರ್ಣಗೊಳ್ಳಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. ಸ್ವಚ್ಛ ಭಾರತಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.  ಶನಿವಾರದಂದು ಬೆಳಗ್ಗೆ ಜನತೆ ಒಗ್ಗೂಡಿ ಸ್ವಚ್ಛತಾ ಹಿ-ಸೇವಾ ಅಭಿಯಾನದ ಆರಂಭಕ್ಕೆ ಸಾಕ್ಷಿಯಾಗಲಿದ್ದಾರೆಂದು ಅವರು ನುಡಿದಿದ್ದಾರೆ. ಸ್ವಚ್ಛಭಾರತ್ ಅಭಿಯಾನದ ಸಹಕಾರಕ್ಕೆ ಅವಿರತ ಶ್ರಮಿಸುತ್ತಿರುವವರೊಂದಿಗೆ ಸಂವಾದ ನಡೆಸಲು ತಾವು ಎದುರು ನೋಡುತ್ತಿದ್ದು, ಆ ಬಳಿಕ ಸ್ವಚ್ಛತಾ ಚಟುವಟಿಕೆಗಳು ಆರಂಭವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.