ಅಮೆರಿಕಗೆ ಅಪ್ಪಳಿಸಿದ ಪ್ಲೊರೆನ್ಸ್ ಚಂಡಮಾರುತ – ಭಾರಿ ವಿಪತ್ತು ಸಂಭವಿಸುವ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ.

ಅಮೆರಿಕದಲ್ಲಿ ಪ್ಲೊರೆನ್ಸ್ ಚಂಡಮಾರುತ ಅಪ್ಪಳಿಸಿದ್ದು, ಅಮೆರಿಕದ ಅಧಿಕಾರಿಗಳು ಭಾರಿ ವಿಪತ್ತು ಸಂಭವಿಸಬಹುದೆಂದು ಎಚ್ಚರಿಕೆ ನೀಡಿದ್ದಾರೆ.
ಪ್ಲೊರೆನ್ಸ್ ಚಂಡಮಾರುತ ದಕ್ಷಿಣದತ್ತ ಸಾಗುತ್ತಿದ್ದು, ಅಲ್ಲಿನ ಜಾರ್ಜಿಯಾ ಭಾಗದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಲಬಾಮ, ಟೆನೆಸ್ಸೀ, ಕೆಂಟುಕಿ ಹಾಗೂ ಪಶ್ಚಿಮ ವಿರ್ಜಿನಿಯಾದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಅಮೆರಿಕದ ರಾಷ್ಟ್ರೀಯ ಚಂಡಮಾರುತ ಕೇಂದ್ರ ನೀಡಿರುವ ಮುನ್ಸೂಚನೆಯಂತೆ ಉತ್ತರ ಕೆರೊಲಿನಾದ ವಿಲ್ಮಿಂಗ್‌ಟನ್‌ನ ಆಗ್ನೇಯ ಭಾಗದಲ್ಲಿ ಚಂಡಮಾರುತದ ಗಾಳಿ ೪೫೫ ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿದೆ. ಇದರ ಪರಿಣಾಮ ದಕ್ಷಿಣ ಕೆರೊಲಿನಾ ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿಡಿಯೋ ಸಂದೇಶದಲ್ಲಿ ಇತಿಹಾಸದಲ್ಲಿ ಕಂಡರಿಯದ ಅತಿ ದೊಡ್ಡ ಚಂಡಮಾರುತ ಇದಾಗಿದ್ದು, ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.