ದೇಶದೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ; ಹಲವು ರಾಜ್ಯಗಳಲ್ಲಿ ವೈಭವದ ಗಣೇಶೋತ್ಸವ.

ಗಣೇಶ ಚತುರ್ಥಿಯನ್ನು ಇಂದಿನಿಂದ ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.೧೦ ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವಕ್ಕೆ ಎಲ್ಲಾಕಡೆ ಸಿದ್ದತೆಗಳು ನಡೆಯುತ್ತಿವೆ. ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ ನೀಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿಗಳನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಇಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ದೇಶದ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಷಯ ಕೋರಿದ್ದಾರೆ.
ಗಣೇಶ ಚತುರ್ಥಿ ಹಬ್ಬ ಎಲ್ಲಾ ಜನರನ್ನು ಒಂದುಗೂಡಿಸುತ್ತದೆ. ಗಣೇಶ ದೇವರು ಅಭಿವೃದ್ಧಿ, ಶಾಂತಿ, ಸಮೃದ್ಧಿ ಮತ್ತು ಅಭ್ಯುದಯಕ್ಕೆ ನಮಗೆ ಮಾರ್ಗದರ್ಶನ ನೀಡಲಿ ಎಂದು ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಮ್ಮ ಸಂದೇಶದಲ್ಲಿ, ಜ್ಞಾನ, ಅಭ್ಯುದಯ ಮತ್ತು ದೇಶದ ಉತ್ತಮ ಭವಿಷ್ಯದ ಸಾಕಾರಕ್ಕಾಗಿ ಗಣೇಶನನ್ನು ಪೂಜಿಸಲಾಗುತ್ತದೆ. ಈ ಹಬ್ಬ ದೇಶದಲ್ಲಿ ಶಾಂತಿ, ಪ್ರಗತಿ ಮತ್ತು ಸೌಹಾರ್ದತೆ ತರಲಿ ಎಂದು ಆಶಿಸಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ದೇಶದ ಜನತೆಗೆ ಗಣೇಶ ಹಬ್ಬದ ಶುಭಾಷಯ ಕೋರಿದ್ದಾರೆ.