ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಕೇವಲ ಘೋಷಣೆಯಲ್ಲ; ದೇಶದ ಪ್ರತಿಯೊಬ್ಬ ಭಾರತೀಯನ ಅಭಿವೃದ್ಧಿಯ ಮೂಲಮಂತ್ರ – ಬಿಜೆಪಿ ಕಾರ್ಯಕರ್ತರು ದೇಶದ ಅಭಿವೃದ್ಧಿಗೆ ತನ್ನ ಕೊಡುಗೆ ನೀಡಬೇಕು; ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ಕೇವಲ ಘೋಷಣೆಯಲ್ಲ ಅಭಿವೃದ್ಧಿ ವಿಚಾರದಲ್ಲಿ ಈ ಮಂತ್ರ ಪ್ರತಿಯೊಬ್ಬ ಭಾರತೀಯರಿಗೂ ಸ್ಪೂರ್ತಿ ತರುವಂತಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇತರ ರಾಜಕೀಯ ಪಕ್ಷಗಳು ಮತ ಬ್ಯಾಂಕ್ ರಾಜಕಾರಣ ಮಾಡುತ್ತವೆ. ಆದರೆ ಬಿಜೆಪಿ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶ ದೊರಕಿಸಬೇಕೆನ್ನುವ ಸಿದ್ದಾಂತವನ್ನು ಅಳವಡಿಸಿಕೊಂಡಿದೆ. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ತ್ವರಿತವಾಗಿ ಬೆಳವಣೆಯಾಗುತ್ತಿದ್ದು, ಕಳೆದ ೪ ವರ್ಷಗಳಲ್ಲಿ ಬೆಳವಣಿಗೆಯ ವೇಗ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು, ಮೇರಾ ಬೂತ್ ಸಬ್ ಸೇ ಮಜ್ಬೂತ್ ಘೋಷಣೆಯಡಿ ಪಶ್ಚಿಮ ಅರುಣಾಚಲ ಪ್ರದೇಶ, ಗಾಜಿಯಬಾದ್, ಹಜಾರಿಬಾಗ್, ಜೈಪುರ ಗ್ರಾಮೀಣಾ ಹಾಗೂ ನವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಅವರು, ಕಾಂಗ್ರಸ್‌ನಲ್ಲಿ ಆ ಪಕ್ಷದ ಪ್ರತಿಭಾವಂತ ಕಾರ್ಯಕರ್ತರು ತಮ್ಮ ಇಡಿ ಬದುಕನ್ನು ಕೇವಲ ಒಂದು ಕುಟುಂಬದ ಅಭಿವೃದ್ಧಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಆದರೆ ಬಿಜೆಪಿಯ ಕೆಲಸ ಕಾರ್ಯಗಳ ಬಗ್ಗೆ ಜನತೆ ಮಾತನಾಡುತ್ತಾರೆ. ಇದನ್ನು ಕಾರ್ಯಕರ್ತರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ದೇಶದ ಅಭಿವೃದ್ಧಿಗಾಗಿ ಪಕ್ಷದ ಕಾರ್ಯಕರ್ತರು ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು. ದೇಶದ ಮೂಲೆ ಮೂಲೆಯಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ದೇಶ ಸೇವೆ ಮಾಡಲು ಪಕ್ಷ ಅವಕಾಶ ನೀಡಿದೆ. ಪಕ್ಷದ ಬೇರುಗಳು ಬಲಿಷ್ಠ ಮತ್ತು ಆಳವಾಗಿದ್ದು, ದೇಶದ ಅಭಿವೃದ್ಧಿಗೆ ಬಿಜೆಪಿ ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.