ತಿತ್ಲಿ ಚಂಡಮಾರುತದ ಪರಿಣಾಮವಾಗಿ ಒಡಿಶಾದ ಗೋಪಾಲಪುರ್ ಸುತ್ತಮುತ್ತ ಭಾರೀ ಮಳೆ- ೩ ಲಕ್ಷಕ್ಕೂ ಅಧಿಕ ನಿವಾಸಿಗಳು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ತಿತ್ಲಿ ಚಂಡಮಾರುತದ ಪರಿಣಾಮವಾಗಿ ಒಡಿಶಾದ ಗೋಪಾಲಪುರ್ ಸುತ್ತಮುತ್ತ ಇಂದು ಬೆಳಗ್ಗೆ ರಭಸದ ಗಾಳಿಯೊಂದಿಗೆ ಅಬ್ಬರದ ಮಳೆಯಾಗಿದೆ.  ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಯಲ್ಲಿನ ಶ್ರೀಕಾಕುಲಂ ಜಿಲ್ಲೆಯಲ್ಲೂ ಸಹ ಚಂಡಮಾರುತದಿಂದಾಗಿ ಧಾರಾಕಾರ ಮಳೆಯಾಗಿದೆ. ಒಡಿಶಾದ ಹಲವು ಭಾಗಗಳಲ್ಲಿ ಚಂಡಮಾರುತ ತೀವ್ರಗೊಂಡಿರುವ ಪರಿಣಾಮವಾಗಿ ಕುಂಭದ್ರೋಣ ಮಳೆಯಾಗುತ್ತಿದೆ. ಅದಾಗ್ಯೂ ಇದುವರೆಗೆ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ೩ ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷತೆಯ ದೃಷ್ಠಿಯಿಂದ ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.  ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಶೇಷ ಪರಿಹಾರ ಆಯುಕ್ತರ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಜನರ ಜೀವ ರಕ್ಷಣೆಗೆ ಅಗತ್ಯ ವ್ಯವಸ್ಥೆಗಳನ್ನು ಸಜ್ಜಾಗಿಡುವಂತೆ ಸೂಚಿಸಿದ್ದಾರೆ.  ಈ ನಡುವೆ ರಾಷ್ಟ್ರೀಯ ವಿಕೋಪ ನಿರ್ವಹಣೆ ಪಡೆ, ಒಡಿಶಾದಲ್ಲಿ ೧೪, ಪಶ್ಚಿಮ ಬಂಗಾಳದಲ್ಲಿ ೩ ಮತ್ತು ಆಂಧ್ರದಲ್ಲಿ ೪ ತಂಡಗಳನ್ನು ಅಗತ್ಯ ರಕ್ಷಣಾ ಉಪಕರಣಗಳೊಂದಿಗೆ ನಿಯೋಜಿಸಿದೆ.