ತೆಲಂಗಾಣ ರಾಜ್ಯದ ಅಂತಿಮ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದ ಹೈದರಾಬಾದ್ ಹೈಕೋರ್ಟ್.

ತೆಲಂಗಾಣಾ ರಾಜ್ಯದ ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲು ಹೈದರಾಬಾದ್ ಹೈಕೋರ್ಟ್, ಭಾರತೀಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ. ಹಿಂದೆ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸದಂತೆ ನೀಡಿದ್ದ ಆದೇಶವನ್ನು ತೆರವುಗೊಳಿಸಿರುವ ನ್ಯಾಯಾಲಯ ನಾಳೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಅವಕಾಶ ನೀಡಿದೆ.

ಕಾಂಗ್ರೆಸ್ ನಾಯಕ ಎಂ.ಶಶಿಧರ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಟಿ.ಬಿ.ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಎಸ್.ವಿ.ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಕ್ರಿಯಾ ಯೋಜನೆ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಕೋರ್ಟ್  ಆದೇಶದ ನಂತರ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ರಜತ್ ಕುಮನಾರ್, ಪರಿಷ್ಕೃತ ಮತದಾರರ ಪಟ್ಟಿಯನ್ನು ನಾಳೆ ಪ್ರಕಟಿಸಲಾಗುವುದು ಎಂದು ಹೇಳಿದರು.