ಭಿಲಾಯ್ ಉಕ್ಕು ಘಟಕ ದುರಂತ: ಮೃತಪಟ್ಟ ಕುಟುಂಬಗಳಿಗೆ ತಲಾ ೩೦ ಲಕ್ಷ ರೂಪಾಯಿ ಪರಿಹಾರ ಪ್ರಕಟ.

ಭಿಲಾಯ್ ಉಕ್ಕು ಘಟಕದಲ್ಲಿ ಮಂಗಳವಾರ ನಡೆದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ೩೦ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ತಿಳಿಸಿದ್ದಾರೆ.

ಅವರು ನಿನ್ನೆ ಅನಿಲ ಕೊಳವೆ ಮಾರ್ಗದಲ್ಲಿ ಸ್ಫೋಟಗೊಂಡು ೧೨ ಮಂದಿ ಮೃತಪಟ್ಟು, ೧೦ ಮಂದಿ ಗಾಯಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ದುರಂತದಲ್ಲಿ ಮೃತಪಟ್ಟ ಕುಟುಂಬದವರ ಮಕ್ಕಳಿಗೆ ಪದವಿ ಮೇರೆಗೆ ಉಚಿತ ಶಿಕ್ಷಣ ನೀಡಬೇಕು ಮತ್ತು ಅವರ ಹತ್ತಿರದ ಸಂಬಂಧಿಗಳಿಗೆ ಉದ್ಯೋಗ ದೊರಕಿಸಿಕೊಡುವಂತೆ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ೧೫ ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ ೨ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದೆಂದು ಸಹ ಅವರು ಪ್ರಕಟಿಸಿದ್ದಾರೆ.

ಸಚಿವರು ಹೆಚ್ಚುವರಿ ಪರಿಹಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮೃತ ಕುಟುಂಬಗಳಿಗೆ ೩೩ರಿಂದ ೯೦ ಲಕ್ಷ ರೂಪಾಯಿವರೆಗೆ ಪರಿಹಾರ ದೊರಕಲಿದೆ. ಘಟನೆ ಹಿನ್ನೆಲೆಯಲ್ಲಿ ಘಟಕದ ಮುಖ್ಯ ಕಾರ್ಯಕಾರಿ ಅಧಿಕಾರಿಯನ್ನು ವರ್ಗಾಯಿಸಲಾಗಿದ್ದು, ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿರುವ ಭಿಲಾಯ್ ಉಕ್ಕು ಘಟಕದ ಕೊಳವೆ ಮಾರ್ಗದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿತ್ತು.