ದೇಶದ ಬಹುತೇಕ ಕಡೆ ಇಂದು ಶ್ರದ್ಧೆ, ಉತ್ಸಾಹದಿಂದ ದೀಪಾವಳಿ ಆಚರಣೆ ; ಉತ್ತರಾಖಂಡ್‍ನ ಹರ್‍ಸಿಲ್ ಸೇನಾ ನೆಲೆಯಲ್ಲಿ ಐಟಿಬಿಪಿ ಯೋಧರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಣೆ

ದೀಪಗಳ ಹಬ್ಬ ದೀಪಾವಳಿಯನ್ನು ಇಂದು ಶ್ರದ್ಧೆ ಉತ್ಸಾಹ ಸಂಭ್ರಮಗಳಿಂದ ಆಚರಿಸಲಾಗುತ್ತಿದೆ.

ದುಷ್ಟಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ವಿಜಯದ ದ್ಯೋತಕವಾಗಿ ಮನೆ ಮಂದಿರ ಮತ್ತು ಇತರೆ ಸಾರ್ವಜನಿಕ ಸ್ಥಳಗಳನ್ನು ದೀಪಗಳಿಂದ ಬೆಳಗುವ ಮೂಲಕ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಈ ಸಂದರ್ಭವಾಗಿ ಜನತೆ ಸಂಪತ್ತಿನ ದೇವತೆ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ನಿನ್ನೆ ಹಬ್ಬ ಆಚರಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ್‍ನ ಅತ್ಯಂತ ದೂರದ ಗಡಿ ಠಾಣೆಯ ಹರ್ಸಿಲ್‍ನಲ್ಲಿ ಭಾರತೀಯ ಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ಇಂದು ದೀಪಾವಳಿ ಆಚರಿಸಿದರು. ಈ ಸಂದರ್ಭದಲ್ಲಿ ಯೋಧರಿಗೆ ಶುಭ ಹಾರೈಸಿದ ಪ್ರಧಾನಮಂತ್ರಿ ಹಿಮಾವೃತ ಎತ್ತರ ಪ್ರದೇಶಗಳಲ್ಲಿ ಕರ್ತವ್ಯ ಪಾಲನೆಯಲ್ಲಿ ತೊಡಗಿರುವ ಯೋಧರು ದೇಶದ ಸಾಮಥ್ರ್ಯವನ್ನು ಸಹಕಾರಗೊಳಿಸುವುದು ಹಾಗೂ 125 ಕೋಟಿ ಭಾರತೀಯರ ಭವಿಷ್ಯ ಕನಸುಗಳನ್ನು ರಕ್ಷಿಸುವವರು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ದೀಪಾವಳಿ ಭೀತಿಯನ್ನು ತೊಡೆದು ಹಾಕಿ, ಒಳಿತಿನ ಬೆಳಕನ್ನು ಹರಡುವುದು ಎಂದು ಮೋದಿ ಹೇಳಿದ್ದಾರೆ. ಯೋಧರು ತಮ್ಮ ಶಿಸ್ತು ಬದ್ಧತೆಗಳ ಮೂಲಕ ಜನತೆಯಲ್ಲಿ ಸುರಕ್ಷತೆ ಮತ್ತು ಭದ್ರತೆಯ ಭಾವವನ್ನು ಹರಡುತ್ತಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಯೋಧರಿಗೆ ಸಿಹಿ ವಿತರಿಸಿದರು. ದೀಪಾವಳಿ ಸಂದರ್ಭವಾಗಿ ತಮಗೆ ಶುಭ ಹಾರೈಸಲು ಬಂದ ಸುತ್ತಮುತ್ತಗಳ ಪ್ರದೇಶಗಳ ಜನತೆಯೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ಇಂದು ಬೆಳಗ್ಗೆ ರುದ್ರಪ್ರಯಾಗ್ ಜಿಲ್ಲೆಯ ಕೇದಾರ್‍ನಾಥ್ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ದಿವಾಳಿ ಶುಭಾಶಯ ಕೋರಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮೋದಿ ಧನ್ಯವಾದ ಅರ್ಪಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರುಣಾಚಲ ಪ್ರದೇಶದ ಅಂದ್ರ ಲಾ ಓಂಕಾರ್ ಹಾಗೂ ಅನಿನಿಯಲ್ಲಿ ಇಂದು ಭಾರತೀಯ ಯೋಧರ ಜೊತೆ ದೀಪಾವಳಿ ಆಚರಿಸಲಿದ್ದಾರೆ. ಎತ್ತರದ ಪ್ರದೇಶದಲ್ಲಿನ ಅಂದ್ರಲ ಓಂಕಾರ್ ಠಾಣೆ ಸಮೀಪದ ರಸ್ತೆಯಿಂದ ಸುಮಾರು 35-40 ಕಿಲೋಮೀಟರ್‍ಗಳಷ್ಟು ಒಳಗೆ ಇದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ, ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿಗೆ ಶುಭ ಹಾರೈಸಿದ್ದಾರೆ.

ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ಎಲ್ಲಾ ನಾಗರಿಕರ ನಡುವೆ ಭ್ರಾತೃತ್ವ ಮತ್ತು ಏಕತೆಯನ್ನು ಉತ್ತೇಜಿಸಲು ದೀಪಾವಳಿ ಒಂದು ಸದಾವಕಾಶ ಎಂದಿದ್ದಾರೆ.

ಉಪರಾಷ್ಟ್ರಪತಿಯವರು, ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ವಿಜಯವನ್ನು ಸಾರುವ ದೀಪಾವಳಿ ಭಗವಾನ್ ರಾಮನಲ್ಲಿದ್ದ ಶ್ರೇಷ್ಠ ಗುಣಗಳಲ್ಲಿ ವಿಶ್ವಾಸವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಟ್ವೀಟ್ ಸಂದೇಶದಲ್ಲಿ ದೀಪಾವಳಿ ಪ್ರತಿಯೊಬ್ಬರ ಬದುಕಿನಲ್ಲಿ ಸಂತಸ, ಆರೋಗ್ಯ, ಸಮೃದ್ಧಿಯನ್ನು ತರಲಿ ಎಂದಿದ್ದಾರೆ.