ಚುನಾವಣಾ ಬಿಕ್ಕಟ್ಟು ಪರಿಹಾರಕ್ಕೆ ನಾಳೆ ಉನ್ನತ ಮಟ್ಟದ ನಿಯೋಗ ಮಿಜೋರಾಂಗೆ ಭೇಟಿ. ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಎನ್‌ಜಿಒ ಸಮನ್ವಯ ಸಮಿತಿಯ ನಾಯಕರೊಂದಿಗೆ ತಂಡದಿಂದ ಸಮಾಲೋಚನೆ – ಕೇಂದ್ರ ಚುನಾವಣಾ ಆಯೋಗ

ಮಿಜೋರಾಂ ರಾಜ್ಯದಲ್ಲಿ ಉದ್ಭವಿಸಿರುವ ಚುನಾವಣಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ, ನಾಳೆ ಆ ರಾಜ್ಯಕ್ಕೆ ಉನ್ನತ ಮಟ್ಟದ ತಂಡವೊಂದನ್ನು ಕಳುಹಿಸುತ್ತಿದೆ. ಈ ತಂಡವು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಎನ್‌ಜಿಒ ಸಮನ್ವಯ ಸಮಿತಿಯ ನಾಯಕರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಲಿದೆ.

ಮಿಜೋರಾಂ ರಾಜ್ಯ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಾಲ್‌ನುನ್ ಮಾವಿಯ ಚೌಂಗೊ ಅವರನ್ನು ಹುದ್ದೆಯಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ವೈಎಂಎ ನೇತೃತ್ವದ ಎನ್‌ಜಿಒ ಸಮನ್ವಯ ಸಮಿತಿ ಕಳೆದ ೨ ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ ಅದು, ಮುಖ್ಯ ಚುನಾವಣಾ ಅಧಿಕಾರಿ ಎಸ್. ಬಿ. ಶಶಾಂಕ್ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸುತ್ತಿದೆ.

ಎನ್‌ಜಿಒ ಸಮನ್ವಯ ಸಮಿತಿಯು ತಾತ್ಕಲಿಕವಾಗಿ ನಿನ್ನೆ ಸಂಜೆ ಪ್ರತಿಭಟನೆಯನ್ನು ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಚುನಾವಣಾ ಆಯೋಗದ ಉಪ ಮುಖ್ಯ ಆಯುಕ್ತ ಸುದೀಪ್ ಜೈನ್ ನೇತೃತ್ವದ ತಂಡ ನಾಳೆ ಮಿಜೋರಾಂಗೆ ತೆರಳಿಲಿದ್ದು, ಶಾಂತಿಯುತ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಲಿದೆ.

ಚುನಾವಣಾ ಆಯೋಗದ ಪ್ರತಿನಿಧಿಗಳ ಜತೆ ವಿಸ್ತೃತ ಚುನಾವಣಾ ಸಮಾಲೋಚನೆ ನಡೆಸಿದ ನಂತರ ಎನ್‌ಜಿಒ ಸಮನ್ವಯ ಸಮಿತಿ ಅಂಗೀಕರಿಸಿರುವ ನಿರ್ಣಯವನ್ನು ಒಪ್ಪಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ಕೊಲಾಸಿಬ್ ಜಿಲ್ಲೆಯಲ್ಲಿ ನಡೆದ ಚುನಾವಣೆ ಸಂಬಂಧಿತ ಹಿಂಸಾಚಾರ ಘಟನೆಗಳು ಗಂಭೀರ ಕಳವಳ ಮೂಡಿಸಿದೆ ಎಂದು ಆಯೋಗ ತನ್ನ ಆತಂಕ ಹೊರ ಹಾಕಿದೆ. ಮಿಜೋರಾಂ ವಿಧಾನಸಭೆಗೆ ಇದೇ ತಿಂಗಳ ೨೮ ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.