ದೇಶದ ಆರ್ಥಿಕ ಸುಧಾರಣೆಗೆ ಅಪಮೌಲೀಕರಣ ಪ್ರಮುಖ ನಿರ್ಧಾರ – ಅರುಣ್ ಜೇಟ್ಲಿ ಪ್ರತಿಪಾದನೆ./

ವಿಧ್ಯುಕ್ತವಾಗಿ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಮೊತ್ತದ ನಗದು ಅಪಮೌಲೀಕರಣ ಮಾಡಿರುವುದೇ ಪ್ರಮುಖ ಕಾರಣವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ.

ಆರ್ಥಿಕ ಬೆಳವಣಿಗೆ ಕುರಿತಂತೆ ಫೇಸ್‌ಬುಕ್‌ನಲ್ಲಿಂದು ಮಾಹಿತಿ ನೀಡಿರುವ ಅವರು ಎಲ್ಲಾ ವರ್ಗದ ಜನರ ಪಾಲ್ಗೊಳ್ಳುವಿಕೆಯಿಂದಾಗಿ ಆರ್ಥಿಕ ಬೆಳವಣಿಗೆ ಸ್ಥಿರತೆಯತ್ತ ಸಾಗಿದೆ ಎಂದರು. ಕಳೆದ ೨ ವರ್ಷಗಳ ಹಿಂದೆ ದೊಡ್ಡಮೊತ್ತದ ನಗದನ್ನು ಅಪಮೌಲೀಕರಣ ಮಾಡಲಾಗಿತ್ತು. ಇದರಿಂದ ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬಂದವು ಎಂದು ಅವರು ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಗಳಲ್ಲಿ ಇರುವ ಕಪ್ಪು ಹಣವನ್ನು ವಾಪಸ್ ತರಲು ನೂತನ ಸುಧಾರಣಾ ಕ್ರಮಗಳು ಸಹಕಾರಿಯಾದವು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಅಪಮೌಲೀಕರಣದ ನಂತರ ಬ್ಯಾಂಕ್ ಖಾತೆದಾರರು ಮಾಡಿರುವ ಜಮಾ ಹಾಗೂ ನಗದು ಪ್ರಮಾಣದ ಎಲ್ಲಾ ಮಾಹಿತಿಯನ್ನು ಪತ್ತೆ ಮಾಡಲಾಗಿದೆ. ೧೭ ಲಕ್ಷ ೪೨ ಸಾವಿರ  ಶಂಕಿತ ಖಾತೆಗಳ ಬಗ್ಗೆಯೂ  ತಪಾಸಣೆ ಮುಂದುವರೆದಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾತನಾಡಿ, ಅಪಮೌಲ್ಯದಿಂದಾಗಿ ಎಲ್ಲ ವರ್ಗದವರು ತೊಂದರೆ ಅನುಭವಿಸಿದರು ಎಂದು ಪುನಃ ಪ್ರತಿಪಾದಿಸಿದ್ದಾರೆ. ಸಣ್ಣ, ಅತಿಸಣ್ಣ ಉದ್ದಿಮೆದಾರರು ಅಪಮೌಲೀಕರಣದ ತೊಂದರೆಯಿಂದ  ಹೊರಬರಲು ಸಾಧ್ಯವಾಗಿಲ್ಲ. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿಯೂ ತೊಂದರೆಯಾಗಿದ್ದು, ಯುವಕರಿಗೆ ಉದ್ಯೋಗ  ದೊರೆಯದೇ ಇರುವುದು ಮತ್ತೊಂದು ಕಾರಣವಾಗಿದೆ ಎಂದು   ಡಾ. ಮನಮೋಹನ್ ಸಿಂಗ್ ಹೇಳಿಕೆಯಲ್ಲಿ  ಪುನರುಚ್ಚರಿಸಿದ್ದಾರೆ.