ಮಧ್ಯಂತರ ಚುನಾವಣಾ ಫಲಿತಾಂಶ ಅದ್ಭುತ ಯಶಸ್ಸು -ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣನೆ. ಡೆಮೊಕ್ರಾಟಿಕ್ ಪಕ್ಷದಿಂದ ಭಾರತೀಯ ಮೂಲದ ನಾಲ್ವರು ಸಂಸದರು ಪುನರಾಯ್ಕೆ.

ಮಧ್ಯಂತರ ಚುನಾವಣೆಯ ಫಲಿತಾಂಶವು ಅದ್ಭುತ ಯಶಸ್ಸು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಆಡಳಿತಾರೂಢ ಪಕ್ಷಗಳು ಈ ಹಿಂದೆ ಮಧ್ಯಂತರ ಚುನಾವಣೆಯಲ್ಲಿ ಪ್ರದರ್ಶಿಸಿರುವ ಫಲಿತಾಂಶಗಳಿಗೆ ಹೋಲಿಸಿದರೆ ಈ ಬಾರಿ ನಮ್ಮ ರಿಪಬ್ಲಿಕನ್ ಪಾರ್ಟಿಯು ಇತಿಹಾಸ ಬರೆದಿದೆ ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಜನತೆಗೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವ ಸಲುವಾಗಿ ಪ್ರತಿಪಕ್ಷ ಡೆಮೊಕ್ರಾಟಿಕ್ ಪ್ರತಿನಿಧಿಗಳೊಂದಿಗೆ ಒಗ್ಗೂಡಿ ಕೆಲಸ ಮಾಡಲಾಗುವುದು.

ದೇಶದ ಅರ್ಥವ್ಯವಸ್ಥೆಯ ಪ್ರಗತಿ, ಮೂಲ ಸೌಕರ್ಯ ಅಭಿವೃದ್ಧಿ, ವ್ಯಾಪಾರ ವಹಿವಾಟು ಹೆಚ್ಚಳ, ಔಷಧಗಳ ಬೆಲೆ ಇಳಿಸುವುದು ಸೇರಿದಂತೆ ನಾನಾ ವಲಯಗಳ ಅಭಿವೃದ್ಧಿಗೆ ಡೆಮೊಕ್ರಾಟಿಕ್ ನಾಯಕರೊಂದಿಗೆ ಜತೆಗೂಡಿ ಸರ್ಕಾರ ಕೆಲಸ ಮಾಡಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಡೆಮೊಕ್ರಾಟಿಕ್ ಜನಪ್ರತಿನಿಧಿಗಳು ಹೊಸ ಪರಿಕಲ್ಪನೆ, ಚಿಂತನೆ, ಸಲಹೆ ಸೂಚನೆ ನೀಡಿದರೆ ಅದನ್ನು ಒಪ್ಪಿ, ಜಾರಿಗೆ ತರಲು ತಾವು ಸಿದ್ಧ ಎಂದು ಟ್ರಂಪ್ ಅವರು ಶ್ವೇತಭವನದಲ್ಲಿ ನಿನ್ನೆ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

೪೩೫ ಸದಸ್ಯ ಬಲದ ಜನಪ್ರತಿನಿಧಿಗಳ ಸಭೆಯಲ್ಲಿ ರಿಪಬ್ಲಿಕನ್ ಪಕ್ಷ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈ ಸದನದಲ್ಲಿ ಡೆಮೊಕ್ರಾಟಿಕ್ ಪಕ್ಷವು ಬಹುಮತ ಗಳಿಸಿದೆ. ಆದರೆ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ೧೦೦ ಸದಸ್ಯ ಬಲದ ಸೆನೆಟ್‌ನಲ್ಲಿ ಪ್ರಾಬಲ್ಯ ಉಳಿಸಿಕೊಂಡಿದ್ದು, ತನ್ನ ಸಂಖ್ಯೆಯಲ್ಲಿ ಕೊಂಚ ಏರಿಕೆ ಮಾಡಿಕೊಂಡಿದೆ.

ಶ್ವೇತಭವನ ಮತ್ತು ಸರ್ಕಾರದ ಆಡಳಿತದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.

ಸಂಪುಟದಲ್ಲೂ ಕೆಲವು ಹಿರಿಯ ಹುದ್ದೆಗಳಿಗೆ ಬದಲಾವಣೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮೆರಿಕದಲ್ಲಿ ನಡೆದ ಮಧ್ಯಂತರ ಚುನವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಸಂಸದರು ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

ಇಲಿನಾಯ್ಸ್‌ನಿಂದ ರಾಜಾ ಕೃಷ್ಣಮೂರ್ತಿ ಅವರು ೨ನೇ ಬಾರಿಗೆ ಪುನರಾಯ್ಕೆಯಾದರೆ, ಕ್ಯಾಲಿಫೋರ್ನಿಯಾದಿಂದ ದಾಖಲೆಯ ೪ನೇ ಬಾರಿಗೆ ಡಾಕ್ಟರ್ ಅಮಿ ಬೆರಾ ಮತ್ತು ಪ್ರಮೀಳಾ ಜಯ್‌ಪಾಲ್,  ಸಿಲಿಕಾನ್ ವ್ಯಾಲಿಯಿಂದ ರೊ ಖನ್ನ ಪುನರಾಯ್ಕೆಯಾಗಿದ್ದಾರೆ.