ರಕ್ಷಣಾ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದೆ- ನರೇಂದ್ರ ಮೋದಿ ಹೇಳಿಕೆ. ಉತ್ತರಾಖಂಡದಲ್ಲಿ ಭೂ ಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಮಂತ್ರಿ.

ದೇಶದ ರಕ್ಷಣಾ ಕ್ಷೇತ್ರವನ್ನು ಸಶಕ್ತಗೊಳಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಉತ್ತರಾಖಂಡದ ದುರ್ಗಮ ಗಡಿ ಭಾಗದಲ್ಲಿರುವ ಹರ್‌ಸಿಲ್‌ನಲ್ಲಿ ಭೂ ಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಭಾರತ ರಕ್ಷಣಾ ವಲಯದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದೆ ಎಂದರು.

ಮಾಜಿ ಯೋಧರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಸೇರಿದಂತೆ ಕೇಂದ್ರ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದೆ.

ದೇಶದ ಜನತೆಯಲ್ಲಿ ಆತಂಕ, ಭಯಗಳನ್ನು ದೂರ ಮಾಡಿಸಿ ದೇಶದ ಭದ್ರತೆಗಾಗಿ ಹಗಲಿರುಳು ದುಡಿಯುತ್ತಿರುವ ಯೋಧರ ಸೇವೆಯನ್ನು ಪ್ರಧಾನಿ ಶ್ಲಾಘಿಸಿದರು.

ಕೆಚ್ಚೆದೆಯ ಯೋಧರೊಂದಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಪ್ರಧಾನಿ ಅವರು, ದುರ್ಗಮ ಪ್ರದೇಶಗಳ  ಹಿಮಚ್ಚಾದಿತ ಬೆಟ್ಟಗುಡ್ಡಗಳಲ್ಲಿ ದೇಶ ಕಾಯುವ ಮಹಾನ್ ಸೇವೆಗಾಗಿ ಸಮರ್ಪಿಸಿಕೊಂಡಿರುವ ಯೋಧರೆ ನಮ್ಮ ದೇಶದ ಬಲ. ಈ ಬಲವೇ  ದೇಶದ ೧೨೫ ಕೋಟಿ ಜನರ ಕನಸುಗಳು ಮತ್ತು ಭವಿಷ್ಯಗಳನ್ನು ಕಾಪಾಡುತ್ತಾ ಬಂದಿದೆ ಎಂದು ಪ್ರಶಂಸಿಸಿದರು.

ಭಾರತೀಯ ಯೋಧರ ಅಸಾಧಾರಣ ಕೌಶಲ ಮತ್ತು ಕೆಚ್ಚೆದೆಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗತ್ತಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯ ಮತ್ತು ಸಾಹಸಕ್ಕೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.