ಶ್ರೀಲಂಕಾದಲ್ಲಿ ನೂತನ ಸಚಿವರ ಪ್ರಮಾಣವಚನ

ಶ್ರೀಲಂಕಾ ನೂತನ ಸರ್ಕಾರದ ಸ್ಥಿರತೆ ಬಗ್ಗೆಯೇ ಅನುಮಾನಗಳು ಮೂಡಿರುವ ನಡುವೆ ಇಂದು ಹಲವರು ಸಚಿವರು  ಪ್ರಮಾಣ ವಚನ ಸ್ವೀಕರಿಸಿದರು.  ನೂತನ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಸಹೋದರ ಮತ್ತು ಮಾಜಿ ಸ್ಪೀಕರ್ ಚಮಲ್ ರಾಜಪಕ್ಸ ಸೇರಿದಂತೆ ಮೂವರು ನೂತನ ಸಚಿವರಿಗೆ ನಿನ್ನೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಮಧ್ಯೆ, ಮುಂದಿನ ಬುಧವಾರ ಆರಂಭವಾಗಲಿರುವ ಸಂಸತ್ತಿನ ಅಧಿವೇಶನ ಕಲಾಪದಲ್ಲಿ ನೂತನ ಸರ್ಕಾರದ ಸ್ಥಿರತೆ ಕುರಿತು ಚರ್ಚಿಸಲು ಮತ್ತು ಅಭಿಪ್ರಾಯ ಸಂಗ್ರಹಿಸಲು ಅವಕಾಶ ನೀಡಲಾಗುವುದು ಎಂದು ಸಂಸತ್ತಿನ ಸ್ಪೀಕರ್ ಕರು ಜಯಸೂರ್ಯ ತಿಳಿಸಿದ್ದಾರೆ. ಇದೇ ೧೪ ರಂದು ಸಂಸತ್ತಿನಲ್ಲಿ ಮೈತ್ರಿಪಾಲ್ ಸಿರಿಸೇನೆ ನೇತೃತ್ವದ ಸರ್ಕಾರ ಬಹುಮತ ಸಾಬೀತು ಪಡಿಸಬೇಕಾಗಿದೆ. ಮೊದಲನೇ ದಿನವೇ ವಿಶ್ವಾಸಮತ ಪಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.ಈ ಮಧ್ಯೆ, ಸಭಾಧ್ಯಕ್ಷರು ಹೇಳಿಕೆ ನೀಡಿ ಮೊದಲನೇ ದಿನವೇ ನೂತನ ಸರ್ಕಾರದ ಬಹುಮತದ ಪರೀಕ್ಷೆ ನಡೆಯಲಿದೆ ಎಂದರು.