ಶ್ರೀಲಂಕಾ ಹೊಸ ಸರ್ಕಾರದ ಸ್ಥಿರತೆ ಕುರಿತು ಮೂಡಿರುವ ಅನುಮಾನಗಳ ನಡುವೆಯೇ ಮೂವರು ನೂತನ ಸಚಿವರ ಪ್ರಮಾಣ ವಚನ.

ಶ್ರೀಲಂಕಾ ನೂತನ ಸರ್ಕಾರದ ಸ್ಥಿರತೆ ಬಗ್ಗೆಯೇ ಅನುಮಾನಗಳು ಮೂಡಿರುವ ನಡುವೆಯೇ ನಿನ್ನೆ ಮೂವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನೂತನ ಪ್ರಧಾನಿ ಮಹಿಂದ ರಾಜಪಕ್ಸ ಅವರ ಸಹೋದರ ಮತ್ತು ಮಾಜಿ ಸ್ಪೀಕರ್ ಚಮಲ್ ರಾಜಪಕ್ಸ ಸೇರಿದಂತೆ ಮೂವರು ನೂತನ ಸಚಿವರಿಗೆ ನಿನ್ನೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಈ ಮಧ್ಯೆ, ಮುಂದಿನ ಬುಧವಾರ ಆರಂಭವಾಗಲಿರುವ ಸಂಸತ್ತಿನ ಅಧಿವೇಶನ ಕಲಾಪದಲ್ಲಿ ನೂತನ ಸರ್ಕಾರದ ಸ್ಥಿರತೆ ಕುರಿತು ಚರ್ಚಿಸಲು ಮತ್ತು ಅಭಿಪ್ರಾಯ ಸಂಗ್ರಹಿಸಲು ಅವಕಾಶ ನೀಡಲಾಗುವುದು ಎಂದು ಸಂಸತ್ತಿನ ಸ್ಪೀಕರ್ ಕರು ಜಯಸೂರ್ಯ ತಿಳಿಸಿದ್ದಾರೆ.

ಸಂಸತ್ ಕಲಾಪದ ಕಾರ್ಯಸೂಚಿಗಳ ಕುರಿತು ನಾನಾ ರಾಜಕೀಯ ಪಕ್ಷಗಳ  ಜತೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು.

ನೂತನ ಸರ್ಕಾರಕ್ಕೆ ಇರುವ ಬೆಂಬಲ ಸಾಬೀತು ಮಾಡಲು ಕಲಾಪದ ಮೊದಲ ದಿನ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಹಿಂದ ರಾಜಪಕ್ಸ ನೇತೃತ್ವದ ನೂತನ ಸರ್ಕಾರ ಬಹುಮತದ ಕೊರತೆ ಅನುಭವಿಸುತ್ತಿದೆ. ಸಣ್ಣ ರಾಜಕೀಯ ಪಕ್ಷಗಳು ನೂತನ ಸರ್ಕಾರಕ್ಕೆ ಬೆಂಬಲ ನೀಡಲು ನಿರಾಕರಿಸುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಮಧ್ಯೆ, ಉಚ್ಛಾಟಿತ ಪ್ರಧಾನಿ ರನಿಲ್ ವಿಕ್ರ್ರೆಮೆಸಿಂಘೆ ಅವರು, ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವುದಾಗಿ ಹೇಳುತ್ತಾ ಬಂದಿದ್ದಾರೆ.