ಮಧ್ಯಪ್ರದೇಶ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆ- ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

ಮಧ್ಯಪ್ರದೇಶ ಹಾಗೂ ಮಿಜೋರಾಂಗಳಿಗೆ ನಡೆಯಲಿರುವ ಒಂದೇ ಹಂತದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ.  ಮಧ್ಯಪ್ರದೇಶದ ೨೩೦ ವಿಧಾನಸಭಾ ಕ್ಷೇತ್ರಗಳು ಮತ್ತು ಮಿಜೋರಾಂನ ೪೦ ವಿಧಾನಸಭಾ ಕ್ಷೇತ್ರಗಳಿಗೆ  ಇದೇ ೨೮ರಂದು ಮತದಾನ ನಡೆಯಲಿದ್ದು, ಡಿಸೆಂಬರ್ ೧೧ ರಂದು ಫಲಿತಾಂಶ ಹೊರಬೀಳಲಿದೆ. ಉಪ ಮುಖ್ಯ ಚುನಾವಣಾ ಆಯುಕ್ತ ಸುದೀಪ್ ಜೈನ್ ನೇತೃತ್ವದ ಉನ್ನತ ಮಟ್ಟದ ಚುನಾವಣಾ ಸಮಿತಿಯ ತಂಡ ಮಿಜೋರಾಂನ ಐಜ್ವಾಲ್‌ಗೆ ಇಂದು ಭೇಟಿ ನೀಡಲಿದ್ದು, ರಾಜ್ಯದ ಸರ್ಕಾರಿ ಅಧಿಕಾರಿಗಳು ಹಾಗೂ ಎನ್.ಜಿ.ಒ ಸಮನ್ವಯ ಸಮಿತಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದೆ. ರಾಜ್ಯದಲ್ಲಿ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಮಾತುಕತೆ ನಡೆಯಲಿದೆ. ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಲಾಲ್ನೌನ್ ಮಾವಿಯಾ ಚೌವಾಂಗೋ ಪದಚ್ಯುತಿ ವಿರೋಧಿಸಿ ಹಾಗೂ ಮುಖ್ಯ ಚುನಾವಣಾಧಿಕಾರಿಯನ್ನು ಬದಲಿಸಲು ಒತ್ತಾಯಿಸಿ ಕಳೆದ ೨ ದಿನಗಳಿಂದ ಎನ್.ಜಿ.ಒ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ.