ಅಸ್ಸಾಂನಲ್ಲಿ ಮೊದಲ ಹಂತದ ಪಂಚಾಯತ್ ಚುನಾವಣೆಗೆ ಮತದಾನ ಪ್ರಗತಿಯಲ್ಲಿ.


ಅಸ್ಸಾಂನಲ್ಲಿ ಇಂದು ಮೊದಲ ಹಂತದ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಶೇಕಡ ೩೦ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಎಚ್.ಎನ್. ಬೋರಾ ಆಕಾಶವಾಣಿಗೆ ತಿಳಿಸಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನ ೩ ಗಂಟೆಗೆ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ ೧೬ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು ೪೩ ಸಾವಿರದ ೫೧೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಂತಿಯುತ ಮತದಾನಕ್ಕೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ ೯೪ ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮತದಾನ ಹಕ್ಕನ್ನು ಚಲಾಯಿಸಲಿದ್ದಾರೆ. ೧೪ ಸಾವಿರದ ೭೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಡಳಿತಾರೂಢ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ಅಸ್ಸೋಮ್ ಗಣಪರಿಷತ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್, ಎಐಯುಡಿಎಫ್, ಎಡಪಕ್ಷಗಳು, ಬೋಡೋಲ್ಯಾಂಡ್ ಪೀಪಲ್ಸ್ ಫ್ರೆಂಟ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೪೪೨ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೨ನೇ ಹಂತದ ಚುನಾವಣೆಗೆ ಇದೇ ತಿಂಗಳ ೯ರಂದು ಮತದಾನ ನಡೆಯಲಿದ್ದು, ೧೨ರಂದು ಮತ ಎಣಿಕೆ ಇದೆ.