ದೇಶದ ಗರಿಷ್ಠ ತೂಕ, ಗಾತ್ರ ಹಾಗೂ ಶಕ್ತಿಶಾಲಿ ಉಪಗ್ರಹವಾದ ಜಿ ಸ್ಯಾಟ್-೧೧ ಉಪಗ್ರಹದ ಉಡಾವಣೆ ಯಶಸ್ವಿ

ದೇಶದ  ಮತ್ತೊಂದು ಮಹಾತ್ವಾಕಾಂಕ್ಷೆಯ ಜಿ ಸ್ಯಾಟ್-೧೧ ಉಪಗ್ರಹವನ್ನು  ಇಂದು ಬೆಳಗಿನ ಜಾವ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಫ್ರೆಂಚ್ ಗಯಾನದ ಕೌರು ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ ೨ ಗಂಟೆ ೭ ನಿಮಿಷಕ್ಕೆ ಸರಿಯಾಗಿ ಜಿ ಸ್ಯಾಟ್ ಉಪಗ್ರಹವನ್ನು ಹೊತ್ತ ಏರಿಯನ್ ಸ್ಪೇಸ್ ರಾಕೆಟ್ ಗಗನಕ್ಕೆ ಚಿಮ್ಮಿತು. ೩೩ ನಿಮಿಷಗಳ ಕರಾರುವಾಕ್ ಕಾರ್ಯಾಚರಣೆಯ ಮೂಲಕ  ಉಪಗ್ರಹವನ್ನು ಮೊದಲ ಹಂತದ ಕಕ್ಷೆಗೆ ಸೇರಿಸಲಾಗಿದೆ. ಇದು ಭಾರತದಲ್ಲಿ ನಿರ್ಮಿಸಿರುವ ಇದುವರೆಗಿನ ಅತಿ ಹೆಚ್ಚು ತೂಕದ,  ಅತಿದೊಡ್ಡ ಗಾತ್ರದ ಹಾಗೂ ಅತಿ ಶಕ್ತಿಶಾಲಿ ಉಪಗ್ರಹವಾಗಿದೆ.  ಜಿ ಸ್ಯಾಟ್-೧೧ ಉಪಗ್ರಹದಿಂದ ದೇಶದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಉಪಗ್ರಹ  ಭಾರತದ ಶ್ರೀಮಂತ ಬಾಹ್ಯಾಕಾಶ ಸಂಪತ್ತು ಎನಿಸಲಿದೆ ಎಂದು ಉಡಾವಣೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷರಾದ ಕೆ. ಸಿವನ್ ಮಾಹಿತಿ ನೀಡಿದರು.  ಜಿ ಸ್ಯಾಟ್-೧೧ ಉಪಗ್ರಹ ದೇಶಕ್ಕೆ ೧೬ ಜಿಬಿಪಿಎಸ್‌ಗೂ ಅಧಿಕ ದತ್ತಾಂಶ ಸಂಪರ್ಕವನ್ನು ಕಲ್ಪಿಸಲಿದೆ. ೩೮ ಸ್ಪಾಟ್ ಬೀಮ್‌ಗಳು ಹಾಗೂ ೮ ಸಬ್ ಬೀಮ್‌ಗಳನ್ನು ಉಪಗ್ರಹ ಹೊಂದಿದ್ದು,  ಅತ್ಯಂತ ದುರ್ಗಮ ಪ್ರದೇಶಗಳು  ಸೇರಿದಂತೆ ದೇಶದ ಸಂಪೂರ್ಣ ಭೂಪ್ರದೇಶ ಇದರ ವ್ಯಾಪ್ತಿಗೆ ಒಳಪಡಲಿದೆ. ಹಾಗೂ ಅತ್ಯಾಧುನಿಕ ಸಂವಹನ ಉಪಕರಣಗಳು ಮತ್ತು ವ್ಯವಸ್ಥೆಗಳ ಸಮರ್ಪಕ ಕಾರ್ಯ ನಿರ್ವಹಣೆಗೂ  ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು. ಜಿ ಸ್ಯಾಟ್-೧೧ ಸಂವಹನ ಉಪಗ್ರಹ ಅಂದಾಜು ೫ ಸಾವಿರದ ೮೫೪ ಕೆಜಿ ತೂಕವಿದ್ದು,  ೧೫ ವರ್ಷಕ್ಕೂ ಹೆಚ್ಚು ಕಾರ್ಯಾವಧಿಯನ್ನು ಹೊಂದಿದೆ.  ಈ ಉಪಗ್ರಹದೊಂದಿಗೆ ಕೊರಿಯಾ ದೇಶದ ಜಿಯೊ ಕಾಂಸ್ಯಾಟ್ -೨ಎ ಎನ್ನುವ ಮತ್ತೊಂದು ಉಪಗ್ರಹವನ್ನು ಸಹ ಏರಿಯನ್ ಸ್ಪೇಸ್ ರಾಕೆಟ್ ಇಂದು ಹೊತ್ತೊಯ್ಯಿತು.