ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ; ಎರಡೂ ರಾಜ್ಯಗಳಲ್ಲಿ ನಾಡಿದ್ದು ಶುಕ್ರವಾರ ಮತದಾನ

ರಾಜಸ್ತಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಈ ಎರಡೂ ರಾಜ್ಯಗಳ ವಿಧಾನಸಭೆಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ಮತದಾರರನ್ನು ಓಲೈಸಿಕೊಳ್ಳಲು ವಿವಿಧ ರಾಜಕೀಯ ಪಕ್ಷಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ರಾಜಸ್ತಾನದ ಹನುಮನಗರ, ಸೀಕಾರ್, ಜೈಪುರಗಳಲ್ಲಿ ಚುನಾವಣಾ ರ‍್ಯಾಲಿ ನಡೆಸಿ ಭಾಷಣ ಮಾಡಿದರು. ಈ ವೇಳೆ ಅವರು, ಕರ್ತಾರ್‌ಪುರ್ ಸಾಹೀಬ್ ಕಾರಿಡಾರ್ ಯೋಜನೆಯ ವಿಳಂಬಕ್ಕೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಇದರ ಆರಂಭದ ಕೀರ್ತಿ ತಮ್ಮ ಬದಲಿಗೆ ರಾಜ್ಯದ ಜನತೆಗೆ ಸಲ್ಲುತ್ತದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ರಾಜಸ್ತಾನದಲ್ಲಿ ಮೂರು ಕಡೆ ಚುನಾವಣಾ ರ‍್ಯಾಲಿ ನಡೆಸಿ, ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಲು ಜನತೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಇನ್ನೊಂದೆಡೆ ವೈಎಸ್‌ಆರ್ ಕಾಂಗ್ರೆಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಸಾವಿರದ ೨೦೦ ಕೋಟಿ ರೂಪಾಯಿ ಕಳುಹಿಸಿದ್ದಾರೆ ಎಂದು ಆರೋಪಿಸಿದೆ.