ರಾಜಾಸ್ತಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆ ; ನಾಳೆ ಮತದಾನ – ವ್ಯಾಪಕ ಏರ್ಪಾಡು.

ರಾಜಾಸ್ತಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯ ನಾಳಿನ ಮತದಾನಕ್ಕೆ ಸಂಬಂಧಿಸಿದಂತೆ ವ್ಯಾಪಕ ಏರ್ಪಾಡುಗಳನ್ನು ಮಾಡಲಾಗಿದೆ.  ಎರಡೂ ರಾಜ್ಯಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರ ನಿನ್ನೆ ಸಂಜೆ ಅಂತ್ಯಗೊಂಡಿದೆ.

ರಾಜಾಸ್ತಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಸರ್ವಮಹಿಳಾ ಮತಗಟ್ಟೆ ಸೇರಿದಂತೆ ಒಟ್ಟು ೫೧ ಸಾವಿರದ ೬೮೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಮತದಾರರು ಮತಚಲಾಯಿಸಲು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದು ಮಾತ್ರ ಏಕಮಾತ್ರ ಅಗತ್ಯವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಆನಂದಕುಮಾರ್ ಹೇಳಿದ್ದಾರೆ.

ಮತದಾರರನ್ನು ಅವರ ಮತದಾರರ ಗುರುತಿನ ಚೀಟಿ ಅಥವಾ ಇನ್ನಾವುದೇ ಅನುಮೋದಿತ ಗುರುತಿನ ಚೀಟಿ ಮೂಲಕ ಗುರುತಿಸಲಾಗುವುದು.

ಮತUಟ್ಟೆಗಳಲ್ಲಿ ಸರದಿ ಸಾಲುಗಳನ್ನು ತಪ್ಪಿಸಲು ವೈಶಿಷ್ಟ್ಯ ಪೂರ್ಣವಾದ ಆಪ್ ಒಂದನ್ನು ಬಿಡುಗಡೆ ಮಾಡಲಾಗಿದೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಈ ಆಪ್ ನೆರವಿನಿಂದ ಮತದಾರರು ಟೋಕನ್ ಪಡೆದು ತಮ್ಮ ಸರದಿ ಬಂದಾಗ ಮತ ಚಲಾಯಿಸಲು ಅವಕಾಶವಿರುತ್ತದೆ.

ತೆಲಂಗಾಣದಲ್ಲಿ ಶಾಂತಿಯುತ ಮತದಾನಕ್ಕಾಗಿ ೧ ಲಕ್ಷ ೬೦ ಸಾವಿರಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ೨೭೦ ಕೇಂದ್ರೀಯ ಸಶಸ್ತ್ರ ಪಡೆಗಳ ತುಕಡಿ, ೩೦ ಸಾವಿರ ರಾಜ್ಯ ಪೊಲೀಸ್ ಸಿಬ್ಬಂದಿ ಹಾಗೂ ೧೮ ಸಾವಿರಕ್ಕೂ ಹೆಚ್ಚು ಇತರ ರಾಜ್ಯಗಳ ಪಡೆಗಳನ್ನು ನಿಯೋಜಿಸಲಾಗಿದೆ.

ನಾಳಿನ ಮತದಾನದಲ್ಲಿ ೪ ಲಕ್ಷ ೫೭ ಸಾವಿರ ದಿವ್ಯಾಂಗರೂ ಸೇರಿದಂತೆ ೨ ಕೋಟಿ ೮೦ ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ರಾಜ್ಯದ ಎಲ್ಲಾ ೩೧ ಜಿಲ್ಲೆಗಳಲ್ಲಿ ೩೨ ಸಾವಿರದ ೮೧೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ೧೧೯ ವಿಧಾನಸಭಾ ಕ್ಷೇತ್ರಗಳಲ್ಲಿ ೧೩೫ ಮಹಿಳೆಯರೂ ಸೇರಿದಂತೆ ೧ ಸಾವಿರದ ೮೨೧ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಿಜೋರಾಂ ಹಾಗೂ ರಾಜಾಸ್ತಾನ ಮತ್ತು ತೆಲಂಗಾಣ ಈ ಎಲ್ಲಾ ರಾಜ್ಯಗಳ ಮತ ಎಣಿಕೆ ಈ ತಿಂಗಳ ೧೧ರಂದು ನಡೆಯಲಿದೆ.