೬೩ನೇ ಮಹಾ ಪರಿನಿರ್ವಾಣ ದಿವಸ್ ಅಂಗವಾಗಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಷ್ಟ್ರದ ನಮನ ; ದೇಶಾದ್ಯಂತ ಅನೇಕ ಕಾರ್ಯಕ್ರಮಗಳ ಆಯೋಜನೆ.

ಭಾರತರತ್ನ, ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೩ನೇ ಮಹಾಪರಿನಿರ್ವಾಣ ದಿನವಾದ ಇಂದು ದೇಶ ಅವರಿಗೆ ನಮನ ಸಲ್ಲಿಸುತ್ತಿದೆ.

ಭಾರತ ಸಂವಿಧಾನದ ಪಿತಾಮಹ ಡಾ. ಅಂಬೇಡ್ಕರ್ ಅವರು ಅತ್ಯುತ್ತಮ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕಾರಣಿಯಾಗಿದ್ದರು. ಅವರು ದಲಿತರು, ಮಹಿಳೆಯರು ಮತ್ತು ಕಾರ್ಮಿಕರ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದ್ದರು.

ಡಾ.ಅಂಬೇಡ್ಕರ್ ಅವರು ೧೯೫೬ರ ಇದೇ ದಿನದಂದು ನಿಧನರಾಗಿದ್ದರು ಮತ್ತು ಈ ದಿನವನ್ನು ಪ್ರತಿ ವರ್ಷ ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. ಈ ಸಂದರ್ಭವಾಗಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ ಭವನದ ಆವರಣದಲ್ಲಿರುವ ಬಾಬಾ ಸಾಹೇಬ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ತಾವರ್ ಚಂದ್ ಗೆಹ್ಲೋಟ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರ ಗಣ್ಯರು ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು.