ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ಹಾಗೂ ಗದ್ದಲ ಮುಂದುವರೆಸಿದ್ದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ತಕ್ಷಣವೇ ವಿವಾಹ ವಿಚ್ಛೇದನ ನೀಡುವ ತ್ರಿವಳಿ ತಲಾಖ್ ಮಸೂದೆ ಕುರಿತಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಮುಂದೂಡುವಂತಾಯಿತು. ಮಸೂದೆಯನ್ನು ಪರಿಶೀಲನೆಗಾಗಿ ಸದನ ಆಯ್ಕೆ ಸಮಿತಿಗೆ ವಹಿಸುವಂತೆ ಪ್ರತಿಪಕ್ಷಗಳು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದವು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿ ಗದ್ದಲ ಉಂಟಾದ್ದರಿಂದ ಉಪಸಭಾಪತಿ ಹರಿವಂಶ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು. ಲೋಕಸಭೆಯಲ್ಲಿ ೨೦೧೮-೧೯ನೇ ಸಾಲಿನ ಅನುದಾನಗಳ ಮೇಲಿನ ಪೂರಕ ಬೇಡಿಕೆಗಳ ೨ನೇ ಕಂತಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ದೇಶದ ವಿತ್ತೀಯ ಕೊರತೆ ತುಂಬಲು ಸರ್ಕಾರಕ್ಕೆ ರಿಸರ್ವ್ ಬ್ಯಾಂಕ್‌ನಿಂದ ಹಣದ ಅಗತ್ಯವಿಲ್ಲ ಎಂದರು. ಈ ಸಂಬಂಧ ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಮೇಲೆ ಒತ್ತಡ ಹೇರಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ವಿತ್ತೀಯ ಕೊರತೆಯನ್ನು ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದರು. ಪೂರಕ ಬೇಡಿಕೆಗಳ ೨ನೇ ಕಂತನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.