ಜಿಎಸ್‌ಟಿ ದರಗಳ ಇಳಿಕೆ, ಇಂದಿನಿಂದ ೨೩ ಸರಕುಗಳು ಮತ್ತು ಸೇವೆಗಳು ಅಗ್ಗ.

ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ ವ್ಯಾಪ್ತಿಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಕಡಿತದ ಪರಿಣಾಮ ಇಂದಿನಿಂದ ಸಿನಿಮಾ ಟಿಕೆಟ್ ಸೇರಿದಂತೆ ೨೩ ವಸ್ತುಗಳು ಅಗ್ಗವಾಗಲಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿ ಡಿಸೆಂಬರ್ ೨೨ರಂದು ಸಭೆ ಸೇರಿ ಶೇಕಡ ೨೮ರ ತೆರಿಗೆ ಶ್ರೇಣಿಯಲ್ಲಿದ್ದ ಹಲವು ಸರಕುಗಳ ತೆರಿಗೆಯನ್ನು ಕಡಿತಗೊಳಿಸಿತ್ತು.
ಸಿನಿಮಾ ಟಿಕೆಟ್, ಕಂಪ್ಯೂಟರ್ ಮಾನಿಟರ್ ಸ್ಕೀನ್, ೩೨ ಇಂಚು ಟಿ.ವಿ ಟೈರ್, ಪವರ್ ಬ್ಯಾಂಕ್‌ಗಳ ಲಿಥಿಯಂ ಬ್ಯಾಟರಿ, ಯಾತ್ರಾ ಸ್ಥಳಗಳಿಗೆ ವಿಮಾನ ಪ್ರಯಾಣ, ಗೇರ್ ಬಾಕ್ಸ್, ವಿಡಿಯೊ ಗೇಮ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡರ್, ದಿವ್ಯಾಂಗರಿಗೆ ಬೇಕಾಗುವ ಸಾಧನಗಳು, ಮ್ಯೂಸಿಕ್ ಬುಕ್, ಸೋಲಾರ್ ಪವರ್, ಸೌರ ವಿದ್ಯುತ್ ಉತ್ಪಾದನಾ ಘಟಕ, ನವೀಕೃತ ಮೂಲದ ಇಂಧನ ಬಳಕೆಯ ಸಾಧನಗಳು, ಸರಕು ಸಾಗಣೆಯ ವಾಹನಗಳ ವಿಮೆ ಪ್ರೀಮಿಯಂ, ಜನ್ ಧನ್ ಯೋಜನೆಯಡಿ ಬ್ಯಾಂಕುಗಳಲ್ಲಿ ಮೂಲ ಉಳಿತಾಯ ಖಾತೆ ಕುರಿತ ಸೇವೆಗಳು ಅಗ್ಗವಾಗಲಿವೆ. ಅಮೃತಶಿಲೆ, ನೈಸರ್ಗಿಕ ಶಿಲೆಗಳು, ವಾಕಿಂಗ್ ಸ್ಟಿಕ್, ಹಾರು ಬೂದಿಯಿಂದ ತಯಾರಿಸುವ ಇಟ್ಟಿಗೆಗಳ ಮೇಲೆಯೂ ತೆರಿಗೆಯನ್ನು ಶೇ.೫ಕ್ಕೆ ತಗ್ಗಿಸಲಾಗಿದ್ದು, ಇವುಗಳ ದರ ಇಳಿಕೆಯಾಗಲಿದೆ.
೧೦೦ ರೂಪಾಯಿವರೆಗಿನ ಸಿನೆಮಾ ಟಿಕೆಟ್ ಮೇಲೆ ಶೇಕಡ ೧೮ರಷ್ಟಿದ್ದ ಜಿಎಸ್‌ಟಿಯನ್ನು ಶೇಕಡ ೧೨ಕ್ಕೆ ಇಳಿಸಲಾಗಿದೆ. ೧೦೦ ರೂಪಾಯಿಗಿಂತ ಹೆಚ್ಚಿನ ದರದ ಟಿಕೆಟ್ ಮೇಲೆ ಶೇ.೨೮ರಷ್ಟಿದ್ದ ಜಿಎಸ್‌ಟಿ ಶೇ.೧೮ಕ್ಕೆ ತಗ್ಗಿದೆ.