ಪಂಜಾಬ್‌ನ ಜಲಂಧರ್‌ನಲ್ಲಿಂದು ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಪ್ರಧಾನಮಂತ್ರಿಗಳಿಂದ ಚಾಲನೆ; ಗುರುದಾಸ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಲಂಧರ್‌ನಲ್ಲಿಂದು ೧೦೬ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅವರು ದೇಶದ ಹಾಗೂ ವಿದೇಶಗಳ ಶಾಲಾ ಮಕ್ಕಳು, ಯುವ ಸಂಶೋಧಕರು, ನೀತಿ ನಿರೂಪಕರು, ಖ್ಯಾತ ವಿಜ್ಞಾನಿಗಳು, ನೊಬೆಲ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಸುಮಾರು ೩೦ ಸಾವಿರ ಮಂದಿ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವಿಜ್ಞಾನ ಕಾಂಗ್ರೆಸ್ ಸಮಾವೇಶ ವಾರ್ಷಿಕ ಸಮಾವೇಶವಾಗಿದ್ದು, ಇದರಲ್ಲಿ ದೇಶದ ಅಗ್ರ ವಿಜ್ಞಾನಿಗಳು ಒಂದೆಡೆ ಕಲೆತು ಸಮಾಲೋಚನೆಗಳನ್ನು ನಡೆಸಲಿದ್ದಾರೆ. ಈ ವರ್ಷದ ಸಮಾವೇಶದ ಘೋಷವಾಕ್ಯ ಭಾರತದ ಭವಿಷ್ಯ-ವಿಜ್ಞಾನ ಮತ್ತು ತಂತ್ರಜ್ಞಾನಎಂಬುದಾಗಿದೆ. ೫ ದಿನಗಳ ಸಮಾವೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ನಾನಾ ವಿಷಯಗಳ ಕುರಿತಂತೆ ನೂರಕ್ಕೂ ಅಧಿಕ ಸಮಾಲೋಚನೆ, ಸಂವಾದ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾವೇಶ ದೇಶ – ವಿದೇಶಗಳ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ನಾಯಕರು ಒಂದೆಡೆ ಕಲೆತು ಪರಸ್ಪರ ವಿಚಾರ ವಿನಿಮಯ ನಡೆಸಲು ಪ್ರತಿ ವರ್ಷ ಆಯೋಜಿತವಾಗುತ್ತದೆ. ನಿನ್ನೆ ಸಂಜೆ ವಿಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜ್ಞಾನ ಜ್ಯೋತಿ ಎನ್ನುವ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನದ ಆಶಯದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಸಲುವಾಗಿ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘ ಮತ್ತು ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ರ‍್ಯಾಲಿಯಲ್ಲಿ ಪಂಜುಗಳನ್ನು ಹಿಡಿದು ಸಾಗಿದರು.  ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಡಿಆರ್‌ಡಿಒ, ಇಸ್ರೋ, ಏಮ್ಸ್, ಯುಜಿಸಿ, ಎಐಸಿಟಿಇ ಹಾಗೂ ದೇಶದ ಮತ್ತು ಅಮೆರಿಕ, ಬ್ರಿಟನ್ ಮತ್ತಿತರ ರಾಷ್ಟ್ರಗಳ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಮಾವೇಶದಲ್ಲಿ ಭಾಗವಹಿಸಲಿವೆ. ಮೂವರು ನೊಬೆಲ್ ಪುರಸ್ಕೃತರು ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ಯುವ ವಿದ್ಯಾರ್ಥಿಗಳು ತಾವು ಅಭಿವೃದ್ಧಿಪಡಿಸಿರುವ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಿದ್ದಾರೆ. ವಿಜ್ಞಾನ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪಂಜಾಬ್‌ನ ಗುರುದಾಸ್‌ಪುರಕ್ಕೆ ತೆರಳಿ ಅಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.