ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಾರ್ಖಂಡ್ ಮತ್ತು ಓಡಿಶಾಗೆ ಭೇಟಿ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಾರ್ಖಂಡ್ ಮತ್ತು ಓಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಜಾರ್ಖಂಡ್‌ನಲ್ಲಿ ಪ್ರಧಾನಿ, ಉತ್ತರ ಕೊಯೆಲ್-ಮಂಡಲ್ ಜಲಾಶಯ ಯೋಜನೆಯ ಪುನರುಜ್ಜೀವನಕ್ಕೆ ಹಾಗೂ ಕನ್ಹಾರ್ ಕಲ್ಲಿನ ಪೈಪ್‌ಲೈನ್ ನೀರಾವರಿ ವ್ಯವಸ್ಥೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದರ ಜತೆಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೨೫ ಸಾವಿರ ಫಲಾನುಭವಿಗಳಿಗಾಗಿ ನಿರ್ಮಿಸಲಾಗಿರುವ ಸಾಂಘಿಕ ಇ- ವಸತಿ ಸಮುಚ್ಛಯವನ್ನು ವಿಡಿಯೊ ಕಾನ್ಫ್‌ರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಓಡಿಶಾಗೆ ತೆರಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಬರಿಪದಾದಲ್ಲಿ ಇಂಡಿಯಲ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಬಲಾಸೋರ್-ಹಲ್ದಿಯಾ-ದುರ್ಗಾಪುರ ವಲಯದ ಅಡುಗೆ ಅನಿಲ ಪೈಪ್‌ಲೈನ್ ಯೋಜನೆಯನ್ನು ಲೋಕಾರ್ಪಣೆಗೊಳಿಸುವರು. ಅಲ್ಲದೆ, ಬಲಾಸೋರ್ ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಹರಿಪುರಗಢನಲ್ಲಿ ಪಾರಂಪರಿಕ ಕೋಟೆಯ ಬಳಿ ರಸಿಕಾ ರೇ ದೇವಸ್ಥಾನದ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳ ಆರಂಭಕ್ಕಾಗಿ ನಾಮಫಲಕ ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ, ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಚತುಷ್ಪಥ ರಸ್ತೆ ನಿರ್ಮಾಣ ಮತ್ತು ಆರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸಹ ಉದ್ಘಾಟಿಸಲಿದ್ದಾರೆ. ಬರಿಪದಾದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.