ಸಂಸತ್‌ನ ಉಭಯ ಸದನಗಳಲ್ಲಿ ಇಂದೂ ಸಹ ವಿವಿಧ ವಿಷಯಗಳ ಕುರಿತಂತೆ ಸದಸ್ಯರ ಗದ್ದಲ ಮುಂದುವರೆದಿದ್ದು ಲೋಕಸಭೆ ಕಲಾಪ ೧೨.೩೦ರವರೆಗೆ ಹಾಗೂ ರಾಜ್ಯಸಭೆ ಮಧ್ಯಾಹ್ನ ೨ ಗಂಟೆವರೆಗೆ ಮುಂದೂಡಿಕೆಯಾಗಿದೆ. ಲೋಕಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಆಗ್ರಹಿಸಿ ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಿದರು. ಇದಲ್ಲದೆ, ಎಚ್‌ಎಎಲ್‌ಗೆ ೧ ಲಕ್ಷ ಕೋಟಿ ರೂಪಾಯಿ ಮೊತ್ತದ ತಯಾರಿಕಾ ಆದೇಶ ನೀಡಿರುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಕುರಿತಂತೆಯೂ ಸದಸ್ಯರು ಗದ್ದಲ ಉಂಟು ಮಾಡಿದರು. ಇದೇ ಸಮಯದಲ್ಲಿ ತೆಲುಗುದೇಶಂ ಪಕ್ಷದ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಸದನದ ಬಾವಿಯಲ್ಲಿ ಘೋಷಣೆ ಕೂಗಿದರು. ಗದ್ದಲ ಹೆಚ್ಚಾದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮೊದಲಿಗೆ ಮಧ್ಯಾಹ್ನ ೧೨ ಗಂಟೆವರೆಗೆ ಬಳಿಕ ೧೨.೩೦ರವರೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಸಮಾಜವಾದಿ ಪಕ್ಷದ ಸದಸ್ಯರು ಉತ್ತರ ಪ್ರದೇಶದಲ್ಲಿ ಸಿಬಿಐ ದಾಳಿ ಕುರಿತಂತೆ ಗದ್ದಲ ಉಂಟು ಮಾಡಿದರು. ಹಿಂದಿನ ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ಕುರಿತ ವಿಷಯ ಪ್ರಸ್ತಾಪಿಸಲು ಸಮಾಜವಾದಿ ಪಕ್ಷದ ಸದಸ್ಯರು ಮುಂದಾದಾಗ ಸಭಾಪತಿ ಎಂ.ವೆಂಕಯ್ಯ ನಾಯ್ಡು ಇದಕ್ಕೆ ಅವಕಾಶ ನೀಡಲಿಲ್ಲ. ಇದೇ ವಿಷಯ ಕುರಿತು ಗದ್ದಲ ಹೆಚ್ಚಾದಾಗ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ ೨ ಗಂಟೆವರೆಗೆ ಮುಂದೂಡಿದರು.