೨೦೧೭-೧೮ನೆ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೯೭ ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ದೆಹಲಿಯಲ್ಲಿಂದು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವಾ ಯೋಜನೆಯಡಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತರಿಗೆ ಉತ್ತೇಜನ ನೀಡಲು ಈ ಪ್ರಶಸ್ತಿ ನೀಡಲಾಗುತ್ತದೆ. ಸಮಾರಂಭದಲ್ಲಿ ಮಾತನಾಡಿದ ಸಚಿವರು, ಅಂಗನವಾಡಿಗಳಿಗೆ ಪೂರೈಸಲಾಗುತ್ತಿರುವ ಸಂಪನ್ಮೂಲಗಳು ಮಕ್ಕಳನ್ನು ತಲುಪುತ್ತಿಲ್ಲ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಂಪನ್ಮೂಲಗಳು ವ್ಯರ್ಥವಾಗಿದ್ದು, ಅವುಗಳನ್ನು ಮಕ್ಕಳ ಪೌಷ್ಟಿಕತೆ ಕುರಿತ ಯೋಜನೆಗಳಿಗೆ ಬಳಸಬಹುದಾಗಿತ್ತು ಎಂದರು. ಅಂಗನವಾಡಿಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕಾರ್ಯಕರ್ತರು ನಿಗಾ ವಹಿಸಬೇಕು ಹಾಗೂ ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಕೂಡಲೇ ವರದಿ ಮಾಡಬೇಕು ಎಂದರು.