ನಾಳೆ ಪುಣೆಯಲ್ಲಿ ಆರಂಭವಾಗಲಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ಮಹಾರಾಷ್ಟ್ರ ಸಕಲ ಸಿದ್ಧತೆ ನಡೆಸಿದೆ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಚಿವ ವಿನೋದ್ ಥಾವ್ಡೆ ಮಾತನಾಡಿ, ೯ ಸಾವಿರ ಕ್ರೀಡಾಪಟುಗಳು ೧೭ ವರ್ಷದೊಳಗಿನವರ, ೨೧ ವರ್ಷದೊಳಗಿನವರ ಸ್ಪರ್ಧೆಗಳಲ್ಲಿ ೧೮ ವಿಭಿನ್ನ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದಿಂದ ೯೦೦ ಸ್ಪರ್ಧಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದು, ೮ರಿಂದ ೧೫ ದಿನಗಳ ಕಾಲ ಕಠಿಣ ತರಬೇತಿ ಪಡೆದಿದ್ದಾರೆ. ಮೊಬೈಲ್ ಹಾಗೂ ಎಲ್ಲ ರೀತಿಯ ಡಿಜಿಟಲ್ ಲೋಕದಲ್ಲಿ ಮುಳುಗಿರುವ ಯುವಜನರನ್ನು ಕ್ರೀಡೆಯತ್ತ ಆಕರ್ಷಿಸುವ ಸಲುವಾಗಿ ಖೇಲೋ ಇಂಡಿಯಾ ಕ್ರಾಂತಿಯಂತೆ ಆರಂಭಗೊಂಡಿದ್ದು, ಇದರಿಂದ ಯುವಜನರ ಮನೋಸ್ಥೈರ್ಯ, ಆರೋಗ್ಯ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇಕಡ ೫ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗುತ್ತದೆ ಎಂದು ಕ್ರೀಡಾ ಸಚಿವರು ತಿಳಿಸಿದ್ದಾರೆ.