ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಮತ್ತೊಮ್ಮೆ ಪಾಕಿಸ್ತಾನಿ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಇಂದು ಮತ್ತೊಮ್ಮೆ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿದ್ದು, ಭಾರಿ ಪ್ರಮಾಣದಲ್ಲಿ ಮಾರ್ಟರ್ ಮತ್ತು ಶೆಲ್ ದಾಳಿ ನಡೆಸಿವೆ. ರಕ್ಷಣಾ ಮೂಲಗಳ ಪ್ರಕಾರ, ಇಂದು ಬೆಳಗ್ಗೆ ೮ ಗಂಟೆ ೩೦ ನಿಮಿಷದ ಸಮಯದಲ್ಲಿ ಗುಲ್ಪಾರ್ ವಲಯದ ಖಾರಿ ಕರ್ಮಾರ ಪ್ರದೇಶದಲ್ಲಿ ಪಾಕ್ ಸೇನೆ ಗಡಿಯಾಚೆಯಿಂದ ಭಾರತೀಯ ಮುಂಪಡೆ ಠಾಣೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತವಾಗಿ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಮತ್ತು ಶೆಲ್ ದಾಳಿ ನಡೆಸಿತು. ಇದಕ್ಕೆ ಜಾಗೃತ ಭಾರತೀಯ ಪಡೆಗಳು ತಕ್ಕ ಉತ್ತರ ನೀಡಿದ್ದು, ಬೆಳಗ್ಗೆ ೧೦ಗಂಟೆಯವರೆಗೆ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿತ್ತು. ಭಾರತೀಯ ಪಡೆಗಳ  ಯಾವುದೇ ಯೋಧರರಿಗೆ ಜೀವಹಾನಿ ಅಥವಾ ಗಾಯವಾಗಿರುವ ವರದಿಗಳು ಬಂದಿಲ್ಲ. ನಿನ್ನೆ ಸಹ ಪಾಕ್ ಪಡೆಗಳು ಭಾರತೀಯ ಹೊರಠಾಣೆ ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದ್ದವು.