ಪಾಕಿಸ್ತಾನದಲ್ಲಿ ಮುಂದುವರಿದ ಹಣಕಾಸು ಬಿಕ್ಕಟ್ಟು

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯಿಂದ ಯಾವುದೇ ಹಣಕಾಸು ನೆರವು ಸಿಗದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳು ಮುಂದುವರಿಯುತ್ತಿವೆ. ಇತ್ತೀಚಿನ ದಿನಗಳಲ್ಲಿ, ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಇಸ್ಲಾಮಾಬಾದ್ ತನ್ನ ಮಿತ್ರ ಸೌದಿ ಅರೇಬಿಯದಿಂದ 2 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನೆರವು ಪಡೆದುಕೊಂಡಿದೆ. ಚೀನಾ ಸಹ ಅನುದಾನವನ್ನು ಘೋಷಿಸಿತು. ಆದರೆ ವಿವರಗಳು ಲಭ್ಯವಾಗಿಲ್ಲ. ಕಳೆದ ವಾರ ಯುಎಇ ಪಾಕಿಸ್ತಾನಕ್ಕೆ ಸುಮಾರು US $ 6.2 ಶತಕೋಟಿಯಷ್ಟು ಹಣಕಾಸು ನೆರವು ಘೋಷಿಸಿತು, ಇದರಲ್ಲಿ 3 ಶತಕೋಟಿ ಡಾಲರ್ ನಗದು ಠೇವಣಿ ಇದೆ. ಪಾಕಿಸ್ತಾನಕ್ಕೆ ತೈಲ ರಫ್ತು ಮಾಡುತ್ತಿದ್ದರೂ ವಿಳಂಬ ಪಾವತಿಗಳಿಗೆ ಯುಎಇ ಒಪ್ಪಿಗೆ ನೀಡಿತು.

ಇಸ್ಲಾಮಾಬಾದ್ ಸುಮಾರು ಎರಡು ದಶಕಗಳಿಂದ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಹಿಂದೆ ಪಾಕಿಸ್ತಾನಕ್ಕೆ IMF ಅನೇಕ ಸಂದರ್ಭಗಳಲ್ಲಿ ಹಣದ ನೆರವನ್ನು ನೀಡಿದೆ. ಆದರೆ, ಇದೀಗ ನೆರವು ನೀಡುವ ಮೊದಲು ನಿರ್ದಿಷ್ಟ ವಿವರಗಳಿಗಳನ್ನು ಕೇಳುತ್ತಿದೆ. ಇದು ಪಾಕಿಸ್ತಾನ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ (ಬಿಆರ್ಐ) ನ ಪಾಲುದಾರರು ಪಾಕಿಸ್ತಾನದ ದೊಡ್ಡ ಫಲಾನುಭವಿಯಾಗಿದ್ದಾರೆ ಮತ್ತು BRI ಅಡಿಯಲ್ಲಿ ವಿವಿಧ ಯೋಜನೆಗಳಲ್ಲಿ ಚೀನಾದಿಂದ ಶತಕೋಟಿ ಡಾಲರ್ ಹಣವನ್ನು ಪಡೆದಿದ್ದಾರೆ. ಚೀನಾ – ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC), ಬಿಆರ್ ಐ ಪ್ರಮುಖ ಕಾರ್ಯಕ್ರಮ ಪಾಕಿಸ್ತಾನಕ್ಕೆ ಬೃಹತ್ ಆರ್ಥಿಕ ಪ್ರಯೋಜನಗಳನ್ನು ತರುವ ಉದ್ದೇಶ ಹೊಂದಿದೆ. ಆದರೆ, ‘ಕಾರಿಡಾರ್’ ಪ್ರಾಂತ್ಯದಿಂದಲೇ ಯೋಜನೆ ವಿರುದ್ದ ದನಿ ಕೇಳಿಬಂದಿದೆ.

ಕಾರಿಡಾರ್ ನಿರ್ಮಾಣದಿಂದಾಗಿ ಪಾಕಿಸ್ತಾನಕ್ಕೆ ಆಗುವ ಆರ್ಥಿಕ ವೆಚ್ಚಗಳ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಯೋಜನೆಯು 2030 ರ ವೇಳೆಗೆ ಪಾಕಿಸ್ತಾನದಲ್ಲಿ 700,000 ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಆದಾಗ್ಯೂ, ಈ ಯೋಜನೆಯು ಹಲವು ದೇಶಗಳಿಂದ ಪ್ರಶ್ನಿಸಲ್ಪಟ್ಟಿದೆ. ಬೀಜಿಂಗ್ ನ ‘ಸಾಲ-ಬಲೆಯ ರಾಜತಂತ್ರ’ಕ್ಕೆ ಪಾಕಿಸ್ತಾನವು ಸಿಲುಕಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾದ ಹ್ಯಾಂಬಾಂಟೋಟ ಬಂದರಿನ ಉದಾಹರಣೆಯನ್ನು ತಜ್ಞರು ನೀಡಿದ್ದಾರೆ., ಚೀನಾದ ಸಾಲಗಳನ್ನು ತೀರಿಸಲಾಗದ ಕಾರಣ 99 ವರ್ಷಗಳ ಲೀಸ್ ನಲ್ಲಿ ಬಂದರನ್ನು ಶ್ರೀಲಂಕಾದ ಸರಕಾರವು ಚೀನಾಕ್ಕೆ ನೀಡಬೇಕಾಗಿದೆ.

ಅಕ್ಟೋಬರ್ 13 ರಂದು ಇಸ್ಲಾಮಾಬಾದ್ ಅನ್ನು ಐಎಂಎಫ್ ಪ್ರಶ್ನಿಸಿದೆ. ಸಿಪಿಇಸಿ ಮತ್ತು ಪಾಕಿಸ್ತಾನದ ಬಾಕಿ ಮೊತ್ತದ ವಿವರಗಳನ್ನು ಇಸ್ಲಾಮಾಬಾದ್ ಇತರ ದೇಶಗಳಿಗೆ ಮತ್ತು 13 ಸಂಸ್ಥೆಗಳಿಗೆ ನೀಡಿತು. ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳನ್ನು ಹಿಂದಿನ ಸರ್ಕಾರಗಳು ಪರಿಹರಿಸಿಲ್ಲ. ಈಗ, ಆರ್ಥಿಕ ಕುಸಿತದಿಂದಾಗಿ ದೇಶ ಮಾನವ ಅಭಿವೃದ್ಧಿ ಪ್ರಮಾಣದಲ್ಲಿ ಹಿಂದುಳಿದಿದೆ. ಜಾಗತಿಕ ಆರ್ಥಿಕತೆ ಕೂಡ ಬಿಗಿಯಾದ ಪರಿಸ್ಥಿತಿಯಲ್ಲಿರುವುದರಿಂದ, ಇಸ್ಲಾಮಾಬಾದ್ ಬಾಹ್ಯ ನೆರವು ಪಡೆಯುವುದು ಕಷ್ಟಕರವೆಂದು ಕಂಡುಬರುತ್ತದೆ.

ಭಯೋತ್ಪಾದನೆಯನ್ನು ಸಾಧನವಾಗಿ ಬಳಸುವ ದೇಶ ಎಂದು ಪಾಕಿಸ್ತಾನ ಕುಖ್ಯಾತಿಯಾಗಿರುವುದು ಗೊತ್ತೇ ಇದೆ. ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF), ಅಂತರರಾಷ್ಟ್ರೀಯ ಭಯೋತ್ಪಾದನಾ ಹಣಕಾಸು ವ್ಯವಹಾರಗಳ ಕಾವಲು ಮಾಡುತ್ತಿರುವ ಈ ಸಂಸ್ಥೆಯು ತನ್ನ ಈ ದೇಶವನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಿದೆ. ಹೀಗಾಗಿ IMF, ವಿಶ್ವ ಬ್ಯಾಂಕ್ ಅಥವಾ ಏಷ್ಯಾದ ಅಭಿವೃದ್ಧಿ ಬ್ಯಾಂಕ್ (ADB) ನಂತಹ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಜನಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲೇ ಐದನೇ ದೊಡ್ಡ ದೇಶ ಪಾಕಿಸ್ತಾನವಾಗಿದೆ ಮತ್ತು ಅದರ ಆರ್ಥಿಕತೆ 147 ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ತಲಾ ಆದಾಯವು US $ 1641 ಆಗಿದೆ. ಇದರ ಜಿಡಿಪಿ ಬೆಳವಣಿಗೆಯ ದರವು 2018 -19 ರಲ್ಲಿ 5.5 ರಷ್ಟಿದೆ. ಬಾಹ್ಯ ನೆರವು ಮತ್ತು ವಿದೇಶದ ಹಣ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲಗಳು. 7 ದಶಕಗಳ ಹಿಂದೆ ಸ್ವಾತಂತ್ರ್ಯವನ್ನು ಹೊಂದಿದ ದೇಶದ ಸರಕಾರಗಳಿಗೆ, ಕೈಗಾರೀಕರಣ ಮತ್ತು ಅಭಿವೃದ್ಧಿ ಆದ್ಯತೆಯ ವಿಷಯವೇ ಆಗಿರಲಿಲ್ಲ!

ದೇಶದ ವಿದೇಶಿ ವಿನಿಮಯ ನಿಕ್ಷೇಪಗಳು ಈ ವರ್ಷ ಅನಿಶ್ಚಿತ ಮಟ್ಟಕ್ಕೆ ಕುಸಿದಿವೆ. ಹೀಗಾಗಿ ಸೌದಿ ಅರೇಬಿಯಾ ಮತ್ತು ಯುಎಇ ಎರಡೂ ‘ನಗದು-ಕಡಿಮೆಯ’ ಪಾಕಿಸ್ತಾನ ಸರ್ಕಾರಕ್ಕೆ ನಗದು ಠೇವಣಿಗಳನ್ನು ನೀಡಿವೆ.

ಪ್ರಧಾನಿ ಇಮ್ರಾನ್ ಖಾನ್ ಅವರು ಯುವಕರಿಗೆ ಒಂದು ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಉದ್ಯೋಗಗಳು ಇನ್ನೂ ಸೃಷ್ಟಿಯಾಗಿಲ್ಲ. ಪಾಕ್ ಮಿಲಿಟರಿ ರಕ್ಷಣಾ ಮತ್ತು ವಿದೇಶಿ ನೀತಿಗಳನ್ನು ನೋಡಿಕೊಳ್ಳುತ್ತಿರುವಂತೆಯೇ ಅವರು ಮಿತ್ರರಾಷ್ಟ್ರಗಳಿಂದ ನೆರವು ಪಡೆಯುತ್ತಿದ್ದಾರೆ. ಪಾಕಿಸ್ತಾನದಲ್ಲಿ ಸರ್ಕಾರಗಳು ಕಂಡುಕೊಂಡ ‘ಸಾಮಾನ್ಯ’ ಮಾರ್ಗವಾಗಿದೆ. ಏತನ್ಮಧ್ಯೆ, ಏಷ್ಯಾದಲ್ಲಿ ಬಾಂಗ್ಲಾದೇಶವು ದೊಡ್ಡ ಆರ್ಥಿಕ ಆಟಗಾರನಾಗಿ ಹೊರಹೊಮ್ಮಿದೆ, ಹೆಚ್ಚುತ್ತಿರುವ ಆದಾಯ ಮತ್ತು ಉದ್ಯೋಗಾವಕಾಶಗಳು ಅಲ್ಲಿ ಸೃಷ್ಟಿಯಾಗಿದ್ದರೂ, ಪಾಕಿಸ್ತಾನ ಮಾತ್ರ ಇನ್ನೂ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ.

ಇಂದಿನ ಜಗತ್ತಿನಲ್ಲಿ, ದೇಶಗಳ ಅಂತರರಾಷ್ಟ್ರೀಯ ಮಟ್ಟವು ಅದರ ಆರ್ಥಿಕ ಬಲದಿಂದ ಗುರುತಿಸಲ್ಪಡುತ್ತಿದೆ. ಇದು ಕೇವಲ ಮೂಲಭೂತ ಮತ್ತು ಸಾಮಾಜಿಕ ಬೆಳವಣಿಗೆಗೆ ಕಾರಣವಾಗಬಹುದು. ಪಾಕಿಸ್ತಾನ ಇದನ್ನು ಅರ್ಥಮಾಡಿಕೊಂಡರಷ್ಟೇ ಆ ದೇಶದ ನಾಗರಿಕರು ಸುಧಾರಣೆಯತ್ತ ಮುಖ ಮಾಡಬಹುದಾಗಿದೆ.

ಲೇಖನ: ಕೌಶಿಕ್ ರಾಯ್, ಸುದ್ದಿ ವಿಶ್ಲೇಷಕರು, ಆಕಾಶವಾಣಿ