ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಇಂದು ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೨೧೧ರ ಸೊಲ್ಲಾಪುರ – ತುಳಜಾಪುರ್ – ಒಸ್ಮಾನಾಬಾದ್ ನಡುವಿನ ಚತುಷ್ಪಥದ ಮಾರ್ಗವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಸೊಲ್ಲಾಪುರ – ಒಸ್ಮಾನಾಬಾದ್ ಹೆದ್ದಾರಿಯಿಂದ ಮಹಾರಾಷ್ಟ್ರದ ಬಹುಮುಖ್ಯ ಪ್ರಾಂತ್ಯವಾದ ಮರಾಠವಾಡದ ಸೊಲ್ಲಾಪುರದ ಸಂಪರ್ಕಕ್ಕೆ ಅನುಕೂಲವಾಗಲಿದೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೩೦ ಸಾವಿರ ಮನೆಗಳ ನಿರ್ಮಾಣಕ್ಕೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ರಿಕ್ಷಾ ಚಾಲಕರು, ಜವಳಿ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರು ಸೇರಿದಂತೆ ವಸತಿರಹಿತ ಬಡವರಿಗೆ ಪ್ರಯೋಜನವಾಗಲಿದೆ. ಸ್ವಚ್ಛ ಭಾರತ್ ಮುನ್ನೋಟದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು, ಸೊಲ್ಲಾಪುರದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ವ್ಯವಸ್ಥೆ ಮತ್ತು ಒಳಚರಂಡಿ ನೀರು ಶುದ್ಧೀಕರಣ ಘಟಕಗಳನ್ನು ಉದ್ಘಾಟಿಸಲಿದ್ದಾರೆ. ಇದಾದ ನಂತರ ಅವರು ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಬಳಿಕ ಪ್ರಧಾನ ಮಂತ್ರಿ ಉತ್ತರ ಪ್ರದೇಶದ ಆಗ್ರಾದಲ್ಲಿ ಗಂಗಾಜಲ್ ಯೋಜನೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸುಮಾರು ೨ ಸಾವಿರದ ೮೮೦ ಕೋಟಿ ರೂಪಾಯಿ ಮೊತ್ತದ ಈ ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ಪ್ರವಾಸಿಗಳಿಗೆ ಅನುಕೂಲವಾಗಲಿದೆ. ಇದಲ್ಲದೆ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಎಸ್‌ಎನ್ ವೈದ್ಯಕೀಯ ಕಾಲೇಜು ಆಧುನೀಕರಣಕ್ಕೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಆಗ್ರಾದ ಕೋಠಿ ಮೀನಾ ಬಜಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ.