ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸುವ ೧೨೪ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ : ಪೌರತ್ವ ತಿದ್ದುಪಡಿ ಮಸೂದೆಗೂ ಲೋಕಸಭೆ ಸಮ್ಮತಿ

ಸಾಮಾನ್ಯ ವರ್ಗದ ಪೈಕಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಲೋಕಸಭೆಗೆ ಅಂಗೀಕಾರ ನೀಡಿದೆ. ಇದರಿಂದ ಆರ್ಥಿಕವಾಗಿ ದುರ್ಬಲ ಜನರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಮತ್ತು ನೇರ ನೇಮಕಾತಿಗಳಲ್ಲಿ ಮೀಸಲಾತಿ ದೊರೆಯಲಿದೆ. ಮಸೂದೆ ಪರ ೩೨೩ ಮತ ಚಲಾವಣೆಗೊಂಡಿದ್ದು, ವಿರುದ್ಧ ೩ ಮತ ಚಲಾವಣೆಯಾದವು. ಸಂವಿಧಾನಕ್ಕೆ ೧೨೪ನೇ ತಿದ್ದುಪಡಿ ತರುವ ಈ ಮಸೂದೆಯನ್ನು ಮಂಡಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಮೇಲ್ವರ್ಗಗಳ ಬಡ ಜನರಿಗೂ ಸಮಾನ ಅವಕಾಶ ದೊರಕಿಸಲು ಈ ಮಸೂದೆ ನೆರವಾಗಲಿದೆ. ಎಲ್ಲಾ ಧರ್ಮಗಳ ಸಾಮಾನ್ಯ ವರ್ಗದ ಕೋಟ್ಯಂತರ ಬಡ ಜನರಿಗೆ ಈ ಮಸೂದೆಯಿಂದ ಸಮಾನ ಅವಕಾಶ ದೊರೆಯಲಿದೆ; ಪ್ರಸ್ತುತ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣಕ್ಕೆ ಯಾವುದೆ ಧಕ್ಕೆಯಾಗದಂತೆ ನೂತನ ಮೀಸಲಾತಿ ಕಲ್ಪಿಸಲಾಗುವುದು ಎಂದರು. ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ನ ಸಂಸದ ಕೆ.ವಿ.ಥಾಮಸ್, ತಮ್ಮ ಪಕ್ಷ ಮಸೂದೆಯ ವಿಚಾರಗಳಿಗೆ ವಿರುದ್ಧವಾಗಿಲ್ಲ, ಆದರೆ ಇದನ್ನು ಜಾರಿಗೊಳಿಸಿದ ವಿಧಾನ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಸಮರ್ಪಕ ಸಿದ್ಧತೆ ಕೈಗೊಳ್ಳದೆ ಮಸೂದೆ ಮಂಡಿಸಲಾಗಿದ್ದು, ಇದನ್ನು ಜಂಟಿ ಸಂಸದೀಯ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೀತಿಯ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಲು ಈ ಮಸೂದೆ ನೆರವಾಗಲಿದೆ ಎಂದರು. ಕೇಂದ್ರ ಸಚಿವ ಮತ್ತು ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್, ಜನಸಾಮಾನ್ಯರ ಬಹುದಿನಗಳ ಬೇಡಿಕೆಯನ್ನು ಎನ್‌ಡಿಎ ಸರ್ಕಾರ ಈಡೇರಿಸಿದೆ. ಸಾಮಾನ್ಯ ವರ್ಗದ ಬಡಜನರಿಗೆ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸುವ ಈ ಅಂಶವನ್ನು ಸಂವಿಧಾನದ ೯ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ಇದರಿಂದ ನ್ಯಾಯಾಲಯದಲ್ಲಿ ಈ ತಿದ್ದುಪಡಿಯನ್ನು ಪ್ರಶ್ನಿಸಲಾಗದು ಎಂದರು. ಟಿಎಂಸಿ ಪಕ್ಷದ ಸುದೀಪ್ ಬಂದೋಪಾಧ್ಯಾಯ, ಬಿಜೆಡಿ ನಾಯಕ ಭರ್ತೃಹರಿ ಮೆಹತಾಬ್, ಸಿಪಿಐಎಂ ಜಿತೇಂದ್ರ ಚೌಧರಿ, ಜೆಡಿಯು ಮತ್ತು ಅಪ್ನಾದಳ್ ಪಕ್ಷದ ಸದಸ್ಯರು ಮಸೂದೆಗೆ ಬೆಂಬಲಿಸಿದರು.