ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲು ಒದಗಿಸುವ ಮಸೂದೆ ಅಂಗೀಕಾರ ಸಾಮಾಜಿಕ ನ್ಯಾಯಕ್ಕೆ ಸಂದ ಜಯ; ಯುವಕರ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶದ ಜೊತೆಗೆ ದೇಶದ ಪರಿವರ್ತನೆಗೆ ಕೊಡುಗೆ ನೀಡಲು ಸಾಧ್ಯ – ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣನೆ.

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲು ಒದಗಿಸುವ ಮಸೂದೆಯನ್ನು ಸಂಸತ್ ಅಂಗೀಕರಿಸಿರುವುದು ಸಾಮಾಜಿಕ ನ್ಯಾಯಕ್ಕೆ ಸಂದ ಜಯವಾಗಿದೆ. ಇದರಿಂದ ಯುವಕರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗುವ ಜೊತೆಗೆ ಅವರು ದೇಶದ ಪರಿವರ್ತನೆ ನಿಟ್ಟಿನಲ್ಲಿ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಅವರು ತಮ್ಮ ಟ್ವೀಟ್‌ನಲ್ಲಿ, ಸಾಮಾನ್ಯ ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ ೧೦ರಷ್ಟು ಮೀಸಲು ಒದಗಿಸುವ ಸಂವಿಧಾನದ ೧೨೪ನೇ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಸೂದೆಗೆ ಇಷ್ಟೊಂದು ಬೆಂಬಲ ವ್ಯಕ್ತವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅವರು, ಇದು ಸಮಗ್ರ ಹಾಗೂ ಬಲಿಷ್ಠ ಭಾರತದ ಕನಸು ಕಂಡ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನೆಕಾರರಿಗೆ ನೀಡುತ್ತಿರುವ ಗೌರವವಾಗಿದೆ ಎಂದರು.

ಮಸೂದೆಯ ಬಗ್ಗೆ ಸದನದಲ್ಲಿ ಉತ್ತಮ ಚರ್ಚೆ ನಡೆಯಿತು, ಹಲವು ಸದಸ್ಯರು ತಮ್ಮೊಳಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು.