ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅವಮಾನ – ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವಮಾನಿಸಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಹೆಸರು ಪ್ರಸ್ತಾಪಿಸದೆ ಮೋದಿ ಅವರು, ಕಾಂಗ್ರೆಸ್ ಮುಖಂಡರ ಈ ಟೀಕೆಗಳು ದೇಶದ ಎಲ್ಲಾ ಮಹಿಳೆಯರಿಗೆ ಮಾಡಿರುವ ಅವಮಾನವಾಗಿದೆ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಲೋಕಸಭೆಯಲ್ಲಿ ರಫೇಲ್ ಒಪ್ಪಂದ ಕುರಿತ ಚರ್ಚೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುತ್ತಿರುವ ಸಮಯದಲ್ಲಿ ವಿರೋಧ ಪಕ್ಷದ ಮುಖಂಡರು ಅವರಿಗೆ ಯಾವ ರೀತಿ ಅವಮಾನ ಮಾಡಿದರು ಎನ್ನುವುದನ್ನು ದೇಶವೇ ನೋಡಿದೆ ಎಂದರು. ಭ್ರಷ್ಟಾಚಾರವನ್ನು ಬೇರು ಸಹಿತ ನಿರ್ಮೂಲನೆ ಮಾಡಬೇಕೆಂಬ ತಮ್ಮ ಉದ್ದೇಶದಿಂದ ಹೆದರಿರುವ ಎಸ್‌ಪಿ ಮತ್ತು ಬಿಎಸ್‌ಪಿ ಯಂತಹ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ ಎಂದು ಮೋದಿ ಹೇಳಿದರು. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಂಡ ಪ್ರಧಾನಿಯವರು, ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟದಲ್ಲಿ ತಪ್ಪು ಮಾಡುವವರನ್ನು ಕತ್ತಲಿನಲ್ಲಿ ಕೂಡಾ ಕಂಡುಹಿಡಿಯಬಲ್ಲೆ ಎಂದರು. ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆಗಸ್ಟಾ ವೆಸ್ಟ್‌ಲಾಂಡ್ ಅತಿ ಗಣ್ಯರ ಹೆಲಿಕಾಪ್ಟರ್ ಪ್ರಕರಣದಲ್ಲಿ ಬಂಧಿತನಾಗಿದ್ದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಇತರ ವಿಮಾನಗಳ ಒಪ್ಪಂದದಲ್ಲಿ ಕೂಡಾ ಲಾಬಿ ಮಾಡುತ್ತಿದ್ದರೆಂದು ಹೇಳಿದರು. ತಮ್ಮ ಪಕ್ಷದ ಯಾವ ಮುಖಂಡರು ಮಿಶೆಲ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವುದನ್ನು ಕಾಂಗ್ರೆಸ್ ಉತ್ತರಿಸಬೇಕು ಎಂದು ಮೋದಿ ಹೇಳಿದರು.