ನವದೆಹಲಿಯಲ್ಲಿ ಜಿಎಸ್‌ಟಿ ಸಮಿತಿ ಸಭೆ ಪ್ರಗತಿಯಲ್ಲಿ; ಸಚಿವರ ಸಮಿತಿಗಳ ಶಿಫಾರಸು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ.

ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ ಮಂಡಳಿಯ ೩೨ನೇ ಸಭೆ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಯಲ್ಲಿದೆ. ಸಚಿವರ ಎರಡು ಸಮಿತಿಗಳು ನೀಡಿರುವ ಹಲವು ಶಿಫಾರಸುಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ನೇತೃತ್ವದ ಸಚಿವರ ಸಮಿತಿ ಎಂಎಸ್‌ಎಂಇ ವಲಯಕ್ಕೆ ಕೆಲವು ವಿನಾಯಿತಿಗಳನ್ನು ನೀಡಲು ಶಿಫಾರಸು ಮಾಡಿದೆ. ಪ್ರಸ್ತುತ ೨೦ ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನೇತೃತ್ವದ ಸಮಿತಿ, ಪ್ರವಾಹಕ್ಕೆ ತುತ್ತಾದ ಕೇರಳದಲ್ಲಿ ಪುನರ್‌ವಸತಿ ಕೈಗೊಳ್ಳಲು ೨ ವರ್ಷದ ವರೆಗೆ ಶೇಕಡ ೧ರಷ್ಟು ಪ್ರಕೋಪ ಸೆಸ್ ಸಂಗ್ರಹಕ್ಕೆ ಅನುಮತಿ ನೀಡುವಂತೆ ಶಿಫಾರಸು ಮಾಡಿದೆ.