ಸಂವಿಧಾನದ ೧೨೪ನೇ ತಿದ್ದುಪಡಿ ಮಸೂದೆ ೨೦೧೯ಕ್ಕೆ ಸಂಸತ್ ಅನುಮೋದನೆ; ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇಕಡ ೧೦ರಷ್ಟು ಮೀಸಲು ಲಭ್ಯ.

ಸಂವಿಧಾನದ ೧೨೪ನೇ ತಿದ್ದುಪಡಿ ಮಸೂದೆ ೨೦೧೯ ಅನ್ನು ರಾಜ್ಯಸಭೆ ಕಳೆದ ರಾತ್ರಿ ಅನುಮೋದನೆ ನೀಡುವುದರೊಂದಿಗೆ ಸಂಸತ್ ಅನುಮೋದನೆ ದೊರಕಿದಂತಾಗಿದೆ. ಲೋಕಸಭೆ ಈ ಮಸೂದೆಗೆ ಮೊದಲೇ ಅನುಮೋದನೆ ನೀಡಿತ್ತು.
ಈ ಮಸೂದೆ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇಕಡ ೧೦ರಷ್ಟು ಮೀಸಲು ಒದಗಿಸಲಿದೆ. ರಾಜ್ಯಸಭೆಯಲ್ಲಿ ಮಸೂದೆಯನ್ನು ಮತಕ್ಕೆ ಹಾಕಿದಾಗ, ೧೬೫ ಸದಸ್ಯರು ಮಸೂದೆಯ ಪರ ಮತ ಚಲಾಯಿಸಿದರು, ಕೇವಲ ಏಳು ಮಂದಿ ಮಸೂದೆ ವಿರುದ್ಧ ಮತ ಚಲಾವಣೆ ಮಾಡಿದರು. ಎಐಎಡಿಎಂಕೆ, ಎಡಪಕ್ಷಗಳು ಹಾಗೂ ಇತರೆ ಪಕ್ಷಗಳು ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ಮಂಡಿಸಿದ ನಿರ್ಣಯವನ್ನೂ ಸಹ ತಿರಸ್ಕರಿಸಲಾಯಿತು.