ರಾಷ್ಟ್ರಪತಿ ಭವನದಲ್ಲಿ ಇಂದು ನಡೆಯಲಿರುವ ೨೦೧೯ರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಲಿದ್ದಾರೆ.
ಎರಡು ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಒಂದು ಬಾಲ ಶಕ್ತಿ ಪುರಸ್ಕಾರ ಹಾಗೂ ಮತ್ತೊಂದು ಬಾಲ ಕಲ್ಯಾಣ ಪುರಸ್ಕಾರವಾಗಿದೆ.
ಆವಿಷ್ಕಾರ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಒಂದು ಜಂಟಿ ಪ್ರಶಸ್ತಿ ಸೇರಿದಂತೆ ೨೬ ಮಕ್ಕಳಿಗೆ ಬಾಲ ಶಕ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ.
ಬಾಲ ಕಲ್ಯಾಣ ಪುರಸ್ಕಾರವನ್ನು ಇಬ್ಬರಿಗೆ ಪ್ರತ್ಯೇಕ ಹಾಗೂ ಮೂರು ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ. ಬಾಲ ಶಕ್ತಿ ಪುರಸ್ಕಾರವು ಒಂದು ಲಕ್ಷ ನಗದು ರೂಪಾಯಿ ಮತ್ತು ಹತ್ತು ಸಾವಿರ ಮೌಲ್ಯದ ಬುಕ್ ವೋಚರ್ ಅನ್ನು ಒಳಗೊಂಡಿರುತ್ತದೆ.
ವೈಯಕ್ತಿಕವಾಗಿ ನೀಡುವ ಬಾಲ ಕಲ್ಯಾಣ ಪುರಸ್ಕಾರ ಎರಡು ಲಕ್ಷ ರೂಪಾಯಿ ನಗದು ಒಳಗೊಂಡಿದ್ದರೆ, ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ತಲಾ ೫ ಲಕ್ಷ ರೂಪಾಯಿಯನ್ನು ಒಳಗೊಂಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ೨೦೧೮ರಲ್ಲಿ ಮಕ್ಕಳಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಯ ಯೋಜನೆಯನ್ನು ಪರಿಷ್ಕರಿಸಿದೆ.