ಆಂಧ್ರಪ್ರದೇಶದ ಗುಂಟೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ವಿಶಾಖಪಟ್ಟಣ್ಣಂ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರ ದೇಶಕ್ಕೆ ಸಮರ್ಪಣೆ – ತಮಿಳುನಾಡು, ಕರ್ನಾಟಕದಲ್ಲೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ.

ಪ್ರಧಾನಮಂತ್ರಿ ನರೇಂದ್ರ ಮೋದಿ ಆಂದ್ರಪ್ರದೇಶದ ಗುಂಟೂರಿನಲ್ಲಿಂದು ೧.೩೩ ಮಿಲಿಯನ್ ಮೆಟ್ರಿಕ್‌ಟನ್ ಸಾಮರ್ಥ್ಯದ ವಿಶಾಖಪಟ್ಟಣ್ಣಂ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರವನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕೆ ಮಾತನಾಡಿದ ಅವರು, ಈ ಯೋಜನೆ ಆಂಧ್ರಪ್ರದೇಶ ಮಾತ್ರವಲ್ಲ ಇಡೀ ದೇಶದ ಇಂಧನ ಬೇಡಿಕೆಯನ್ನು ಈಡೇರಿಸಲಿದೆ ಎಂದು ಹೇಳಿದರು. ರಾಜ್ಯದ ಜನರು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಅವರು ಕೃಷ್ಣ, ಗೋದಾವರಿ ತೀರದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ವಸಿಷ್ಠ ಮತ್ತು ಎಸ್-೧ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸುವರು.ಪ್ರಧಾನಿ ಅವರು ಕೃಷ್ಣಪಟ್ಟಣ್ಣಂನಲ್ಲಿ ಭಾರತ್ ಪೆಟ್ರೋಲಿಯಂ ನಿಗಮದ ನೂತನ ಟರ್ಮಿನಲ್ ಸ್ಥಾಪನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಏರ್ಪಡಿಸಿರುವ ಕಾರ್ಯಕ್ರಮಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ ತಮಿಳುನಾಡಿನ ತಿರುಪ್ಪೂರ್‌ಗೆ ತಲುಪಲಿದ್ದಾರೆ. ಅಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಿ, ವೀಡಿಯೋ ಕಾನ್ಫರೆನ್ಸ್ ಮೂಲಕ ಇತರ ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ೧೦ ಕಿಲೋಮೀಟರ್ ಉದ್ದದ ಚೆನ್ನೈ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಇದು ಡಿಎಂಎಸ್ ಮತ್ತು ವಾಷರ್‌ಮನ್‌ಪೇಟೆಯನ್ನು ಸಂಪರ್ಕಿಸಲಿದೆ. ಇದರೊಂದಿಗೆ ೧೯ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ೪೫ ಕೀಲೋಮೀಟರ್ ಉದ್ದದ ಪ್ರಥಮ ಹಂತದ ಮೆಟ್ರೋ ರೈಲು ಸೇವೆ ರಾಜಧಾನಿಯಲ್ಲಿ ಪೂರ್ಣಗೊಂಡಿದೆ.ಬಳಿಕ ಚೆನ್ನೈನಲ್ಲಿ ಭೇಟಿ ನೀಡಲಿರುವ ಪ್ರಧಾನಮಂತ್ರಿ ಅವರು, ಇಎಸ್‌ಐಸಿ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸುವರು. ನೂರು ಹಾಸಿಗೆಯುಳ್ಳ ಈ ಆಸ್ಪತ್ರೆಯು ರಾಜ್ಯದ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಕೂಲವಾಗಲಿದೆ. ಚೆನ್ನೈ ಮತ್ತು ತಿರುಚಿ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳ ವಿಸ್ತರಣೆ ಮತ್ತು ಆಧುನೀಕರಣ ಹಾಗೂ ಭಾರತ್ ಪೆಟ್ರೋಲಿಯಂ ಮತ್ತು ಚೆನ್ನೈ ಪೆಟ್ರೋಲಿಯಂ ಮೂಲ ಸೌಕರ್ಯಗಳಿಗೆ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಬಿಜೆಪಿ ಏರ್ಪಡಿಸಿರುವ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ಧಾರವಾಡದ, ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಮೊದಲ ಹಂತಕ್ಕೆ  ಶಂಕುಸ್ಥಾಪನೆ ನೆರವೇರಿಸಿ,  ಹುಬ್ಬಳ್ಳಿಯಲ್ಲಿ, ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಧಾರವಾಡದಲ್ಲಿ ನಗರ ಅಡುಗೆ ಅನಿಲ ವಿತರಣಾ ವ್ಯವಸ್ಥೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ವೀಡಿಯೋ ಕಾನ್ಫರೆನ್ಸ್ ಮೂಲಕ ೧.೫ ಎಂಎಂಟಿ ಸಾಮರ್ಥ್ಯದ ಮಂಗಳೂರು ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರ-ಎಸ್‌ಪಿಆರ್ ಮತ್ತು ೨.೫ ಎಂಎಂಟಿ ಸಾಮರ್ಥ್ಯದ ಪಡೂರು ಎಸ್‌ಪಿಆರ್ ಲೋಕಾರ್ಪಣೆ ಮಾಡವರು. ಚಿಕ್ಕಜಾಜೂರು-ಮಾಯಕೊಂಡ ನಡುವಣ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸಂಜೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.