ಆಂಧ್ರಪ್ರದೇಶ್, ತಮಿಳುನಾಡು ಹಾಗೂ ಕರ್ನಾಟಕದ ಹುಬ್ಬಳ್ಳಿಯಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು, ಆಂಧ್ರಪ್ರದೇಶದ ಗುಂಟೂರು, ತಮಿಳುನಾಡಿನ ತ್ರಿಪುರಾ ಹಾಗೂ ಕರ್ನಾಟಕ ರಾಜ್ಯದ ಹುಬ್ಬಳಿಗೆ ಭೇಟಿ ನೀಡಲಿದ್ದು, ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವರು.

ಗುಂಟೂರುನಲ್ಲಿ ಅವರು, ಭಾರತೀಯ ಕಾರ್ಯತಂತ್ರದ ಪೆಟ್ರೋಲಿಯಂ ರಿಸರ್ವ್ ನಿಯಮಿತದ ೧.೩೩ ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ವಿಶಾಖಪಟ್ಟಣ ಕಾರ್ಯತಂತ್ರದ ಪೆಟ್ರೋಲಿಯಂ ರಿಸರ್ವ್ ಸೌಲಭ್ಯವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೆ ಕೃಷ್ಣಾ-ಗೋದಾವರಿ ಕಡಲಾಚೆಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಒಎನ್‌ಜಿಸಿಯ ವಶಿಷ್ಠ ಮತ್ತು ಎಸ್೧ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸುವರು. ಜತೆಗೆ ಕೃಷ್ಣಪಟ್ಟಣಂನಲ್ಲಿ ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ-ಬಿಪಿಸಿಎಲ್‌ನ ನೂತನ ಟರ್ಮಿನಲ್ ಸ್ಥಾಪನೆಗೂ ಶಂಕುಸ್ಥಾಪನೆ ನೆರವೇರಿಸುವರು.

ಬಳಿಕ ತಮಿಳುನಾಡಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ಅವರು, ಇಎಸ್‌ಐಸಿ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸುವರು. ನೂರು ಹಾಸಿಗೆಯುಳ್ಳ ಈ ಆಸ್ಪತ್ರೆಯು ರಾಜ್ಯದ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಕೂಲವಾಗಿದೆ. ಇದರ ಜತೆಗೆ ತಮಿಳುನಾಡಿನಲ್ಲಿಯೇ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳಿಗೂ ನರೇಂದ್ರ ಮೋದಿ ಅವರು ಉದ್ಘಾಟನೆ ನೆರವೇರಿಸುವರು.

ಬಳಿಕ ಕರ್ನಾಟಕಕ್ಕೆ ಪ್ರಯಾಣ ಬೆಳೆಸುವ ಪ್ರಧಾನಮಂತ್ರಿ, ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಲಿರುವ ಅವರು, ಧಾರವಾಡದಲ್ಲಿ ಐಐಟಿ ಕೇಂದ್ರ ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ, ನಗರ ಅಡುಗೆ ಅನಿಲ ವಿತರಣಾ ವ್ಯವಸ್ಥೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಧಾರವಾಡದಲ್ಲಿ ನಿರ್ಮಿಸಿರುವ ೨ ಸಾವಿರದ ೩೮೪ ಮನೆಗಳ ಇ-ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ವೀಡಿಯೋ ಕಾನ್ಫರೆನ್ಸ್ ಮೂಲಕ ೧.೫ ಎಂಎಂಟಿ ಸಾಮರ್ಥ್ಯದ ಮಂಗಳೂರು ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರ-ಎಸ್‌ಪಿಆರ್ ಮತ್ತು ೨.೫ ಎಂಎಂಟಿ ಸಾಮರ್ಥ್ಯದ ಪಡೂರು ಎಸ್‌ಪಿಆರ್‌ಯ ಲೋಕಾರ್ಪಣೆ ಹಾಗೂ ಚಿಕ್ಕಜಾಜೂರು-ಮಾಯಕೊಂಡ ನಡುವಣ ೧೮ ಕಿ.ಮೀ. ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋಡಗಾಮ ನಡುವಣ ೩೪೬ ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿಗೆ ಅವರು ಚಾಲನೆ ನೀಡಲಿದ್ದಾರೆ. ಸಂಜೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.