ಪೌರತ್ವ ತಿದ್ದುಪಡಿ ವಿಧೇಯಕದಿಂದ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಜನರ ಹಿತಾಸಕ್ತಿಗೆ ಯಾವುದೇ ರೀತಿ ಹಾನಿ ಉಂಟಾಗದು; ಪ್ರಧಾನ ಮಂತ್ರಿ ಭರವಸೆ.

ಪೌರತ್ವ ತಿದ್ದುಪಡಿ ವಿಧೇಯಕದಿಂದ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಜನರ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಹಾನಿ ಉಂಟಾಗದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

ಅಸ್ಸಾಂ ರಾಜ್ಯದ ಚಂಗ್ಸಾರಿಯಲ್ಲಿ ನಿನ್ನೆ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಗಳ ಸಮಗ್ರ ತನಿಖೆ ಮತ್ತು ಶಿಫಾರಸ್ಸಿನ ನಂತರ ಮಾತ್ರ ಇಲ್ಲಿಯ ಜನತೆಗೆ ಪೌರತ್ವ ನೀಡಲಾಗುವುದು. ದೌರ್ಜನ್ಯ ಮತ್ತಿತರ ಹಿಂಸಾಚಾರಗಳಿಂದ ನೆರೆಹೊರೆಯ ರಾಷ್ಟ್ರಗಳಿಗೆ ಹೋಗಿ ನೆಲೆಸಿರುವ ಇಲ್ಲಿನ ಅಲ್ಪಸಂಖ್ಯಾತರಿಗೆ ಆಶ್ರಯ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಭರವಸೆ ನೀಡಿದರು.

೩೬ ವರ್ಷಗಳಷ್ಟು ಹಳೆಯದಾದ ಅಸ್ಸಾಂ ಒಪ್ಪಂದವನ್ನು ನಿಗದಿತ ಗಡುವಿನಲ್ಲಿ ಜಾರಿಗೆ ತರಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಅಸ್ಸಾಂ ರಾಜ್ಯವನ್ನು ವಿನಾಶ ಮಾಡಲು ಯಾರೊಬ್ಬರಿಗೆ ಅವಕಾಶ ನೀಡುವುದಿಲ್ಲ. ಎನ್‌ಡಿಎ ಸರ್ಕಾರವೊಂದೇ ಅಸ್ಸಾಂ ಒಪ್ಪಂದವನ್ನು ಈಡೇರಿಸಲಿದೆ ಎಂದು ಅವರು ಪುನರುಚ್ಚರಿಸಿದರು.

ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ನರೇಂದ್ರ ಮೋದಿಯವರು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಹೊಲ್ಲೊಂಗಿಯಲ್ಲಿ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ನಿರ್ಮಾಣ, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಕಟ್ಟಡ, ಇಟಾ ನಗರದಲ್ಲಿ ಡಿಡಿ ಅರುಣ್ ಪ್ರಭಾ ವಾಹಿನಿ ಸೇರಿದಂತೆ ಹಲವು ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಈಶಾನ್ಯ ರಾಜ್ಯಗಳು ಪ್ರತಿ ಕ್ಷೇತ್ರದಲ್ಲು ಕ್ಷಿಪ್ರ ಪ್ರಗತಿ ಕಂಡಾಗ ಮಾತ್ರ ನವಭಾರತ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.

ಈಶಾನ್ಯ ರಾಜ್ಯಗಳ ಪ್ರವಾಸದ ಕೊನೆಯ ಚರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ತ್ರಿಪುರಾದ ಅಗರ್ತಾಲದಲ್ಲಿಂದು ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಗರ್ಜಿ-ಬೆಲೋನಿಯಾ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದರು. ಈ ರೈಲು ಮಾರ್ಗವು ತ್ರಿಪುರಾದಿಂದ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ನರ್ಸಿಂಗರ್‌ನಲ್ಲಿ ತ್ರಿಪುರಾ ತಂತ್ರಜ್ಞಾನ ಸಂಸ್ಥೆಯ ನೂತನ ಸಂಕೀರ್ಣದ ಉದ್ಘಾಟನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.  

ಅಗರ್ತಲಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಪ್ರತಿಪಕ್ಷಗಳು ಮಹಾಘಟಬಂಧನದ ಮೂಲಕ ತಮ್ಮನ್ನು ನಿಂದಿಸುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಟೀಕಿಸಿದರು.