ಉತ್ತರ ಪ್ರದೇಶದ ವೃಂದಾವನ್‌ನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಒದಗಿಸುತ್ತಿರುವ ೩ ಶತಕೋಟಿ ಬಿಸಿಯೂಟ ಪೂರೈಸುವ ದ್ಯೋತಕ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉತ್ತರಪ್ರದೇಶದ  ವೃಂದಾವನ್ ಗೆ ಭೇಟಿ ನೀಡಲಿದ್ದಾರೆ.

ನಂತರ ಅವರು ಅಲ್ಲಿನ ವೃಂದಾವನ್ ಚಂದ್ರೋದಯ ಮಂದಿರದಲ್ಲಿ ಅಕ್ಷಯ ಪಾತ್ರ ಫೌಂಡೇಷನ್ ಒದಗಿಸುತ್ತಿರುವ ೩ ಶತಕೋಟಿ ಬಿಸಿಯೂಟ  ಪೂರೈಸುವ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಲಿದ್ದಾರೆ.

ಬಳಿಕ ಪ್ರಧಾನಿ ಅಲ್ಲಿನ ಶಾಲಾ ಮಕ್ಕಳಿಗೆ ಇದರ ದ್ಯೋತಕವಾಗಿ ಊಟ ಬಡಿಸಲಿದ್ದಾರೆ. ತದನಂತರ ಅಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯನ್ನುದ್ದೇಶಿ ಪ್ರಧಾನಮಂತ್ರಿ ಭಾಷಣ ಮಾಡಲಿದ್ದಾರೆ.

ಈ ಭೇಟಿ ವೇಳೆ ಪ್ರಧಾನಿ ಅವರು, ಇಸ್ಕಾನ್ ನ ಆಚಾರ್ಯರಾದ ಶ್ರಿಲಾ ಪ್ರಭುಪಾದ್ ಅವರ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಈ ಅಕ್ಷಯ ಪಾತ್ರ ಫೌಂಡೇಷನ್ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪಾಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ೧೨ ರಾಜ್ಯಗಳನ್ನೊಳಗೊಂಡ ೧೪ ಸಾವಿರದ ೭೦೨ ಶಾಲೆಗಳ ೧.೭೬ ಶತಕೋಟಿ ಮಕ್ಕಳಿಗೆ ಕಳೆದ ೧೯ ವರ್ಷಗಳಿಂದ ಈ ಫೌಂಡೇಷನ್ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ.

೨೦೧೬ರಲ್ಲಿ ೨ ಶತಕೋಟಿ ಬಿಸಿಯೂಟ  ಪೂರೈಸುವ ದ್ಯೋತಕವಾಗಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಫೌಂಡೇಷನ್ ಗುಣಮಟ್ಟದ, ಆರೋಗ್ಯಕರ ಮತ್ತು ಪೋಷಕಾಂಶಯುಕ್ತ ಆಹಾರವನ್ನು ಲಕ್ಷಾಂತರ ಮಕ್ಕಳಿಗೆ ಒದಗಿಸುತ್ತಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಪ್ರಧಾನಿ ಅವರು ಸೆಲ್ಫ್ ಸೋಸೈಟಿ ಆಪ್ ಬಿಡುಗಡೆಗೊಳಿಸಿ, ಫೌಂಡೇಷನ್ ಕುರಿತು ಶ್ಲಾಘಿಸಿದ್ದರು.