ಉತ್ತರ ಪ್ರದೇಶದ ಸಹರಾನ್‌ಪುರ್ ಮತ್ತು ಖುಷಿನಗರ್‌ನಲ್ಲಿ ನಡೆದ ಕಳ್ಳಭಟ್ಟಿ ದುರಂತ ಕುರಿತ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ

ಉತ್ತ್ತರ ಪ್ರದೇಶದ ಸಹರಾನ್‌ಪುರ್ ಮತ್ತು ಖುಷಿನಗರ್‌ನಲ್ಲಿ ನಡೆದ ಕಳ್ಳಭಟ್ಟಿ ದುರಂತದ ಕುರಿತ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ -ಎಸ್‌ಐಟಿಯನ್ನು ನೇಮಿಸಿದೆ. ಈ ತಂಡದ ನೇತೃತ್ವವನ್ನು ರೈಲ್ವೇ ಪೋಲಿಸ್ ಮಹಾನಿರ್ದೇಶಕ ಸಂಜಯ್ ಸಿಂಘಾಲ್ ವಹಿಸಲಿದ್ದಾರೆ ಎಂದು ಕಛೇರಿ ವಕ್ತಾರರು ತಿಳಿಸಿದ್ದಾರೆ. ೧೦ ಕೆಲಸದ ದಿನಗಳೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ದುರಂತಕ್ಕೆ ಕಾರಣವನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೆ, ಘಟನೆ ಹಿಂದೆ ಅಡಗಿರಬಹುದಾದ ಪಿತೂರಿ ಕುರಿತು ಶೋಧಿಸಿ, ಪೋಲಿಸರು ಮತ್ತು ಅಬಕಾರಿ ಅಧಿಕಾರಗಳ ಮೇಲೆ ಜವಾಬ್ದಾರಿಯನ್ನು ಹೊರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಐಟಿಗೆ ತಿಳಿಸಲಾಗಿದೆ. ಇದೇ ವೇಳೆ ರಾಜ್ಯ ಸರ್ಕಾರ ಕಳೆದ ರಾತ್ರಿ ಎರಡೂ ಜಿಲ್ಲೆಗಳ ಬಾಧಿತ ಪ್ರದೇಶಗಳ ವಲಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.  ಪೋಲಿಸ್ ಮತ್ತು ಅಬಕಾರಿ ಅಧಿಕಾರಿಗಳು ರಾಜ್ಯಾದ್ಯಂತ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ಧಂದೆಯಲ್ಲಿ ತೊಡಗಿರುವ ಸುಮಾರು ೩ ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಉಭಯ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಒಟ್ಟು ೪೫ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಹರಾನ್‌ಪುರದಲ್ಲಿ ೩೬ ಜನ ಮತ್ತು ಖುಷಿನಗರದಲ್ಲಿ ೯ ಜನರು ಮೃತಪಟ್ಟಿರುವ ಕುರಿತು ವರದಿಯಾಗಿದೆ.