ಗ್ರೇಟರ್ ನೊಯ್ಡಾದಲ್ಲಿ 13ನೇ ಅಂತಾರಾಷ್ಟ್ರೀಯ ತೈಲ ಹಾಗೂ ಅನಿಲ ಸಮ್ಮೇಳನ ; ಪೆಟ್ರೋ ಟೆಕ್- 2019ಕ್ಕೆ ಪ್ರಧಾನಮಂತ್ರಿ ಚಾಲನೆ ; ದೇಶಾದ್ಯಂತ ನೀಲಿಜ್ವಾಲೆ ಕ್ರಾಂತಿ ನಡೆಯುತ್ತಿದೆ ಹಾಗೂ ಕೇವಲ ಮೂರು ವರ್ಷಗಳಲ್ಲಿ ಉಜ್ವಲ ಯೋಜನೆಯಡಿ 64 ದಶಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಪ್ರಧಾನಿ ಮಾಹಿತಿ

ಉತ್ಪಾದಕರು ಹಾಗೂ ಬಳಕೆದಾರರ ಹಿತಾಸಕ್ತಿಯಲ್ಲಿ ಸಮತೋಲನ ಕಾಯ್ದುಕೊಂಡು ತೈಲ ಮತ್ತು ಅನಿಲಗಳ ಬೆಲೆಯಲ್ಲಿ ಜವಾಬ್ದಾರಿಯುತ ನಡೆಯನ್ನು ಹೊಂದುವುದು  ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿಂದು 13ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮ್ಮೇಳನ – ಪೆಟ್ರೋಟೆಕ್ –2019ಕ್ಕೆ  ಅವರು ಅಧಿಕೃತ ಚಾಲನೆ ನೀಡಿದರು.

ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಪಾರದರ್ಶಕ ಹಾಗೂ ಹೊಂದಾಣಿಕೆಯ ಮಾರುಕಟ್ಟೆ ನಿರ್ಮಾಣಕ್ಕೆ  ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಪ್ರಧಾನಿ ಹೇಳಿದರು.

ಜಾಗತಿಕ ಇಂಧನ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇಂಧನ ಪೂರೈಕೆ ಹಾಗೂ ಮೂಲಗಳು ಮತ್ತು ಇಂಧನ ಬಳಕೆಯ ವಿಧಾನಗಳು ಬದಲಾಗುತ್ತಿವೆ ಎಂದು ಅವರು  ಹೇಳಿದರು.

ಪಶ್ಚಿಮದಿಂದ ಪೂರ್ವಕ್ಕೆ ಇಂಧನ ಬಳಕೆ ಸ್ಥಳಾಂತರವಾಗಿದೆ. ಇಂಧನ ಕ್ಷೇತ್ರದಲ್ಲಿ ವಿಶ್ವ ಎದುರಿಸುತ್ತಿರುವ ಸವಾಲುಗಳ ಚರ್ಚೆಗೆ ಈ ಸಮ್ಮೇಳನ ಉತ್ತಮ ವೇದಿಕೆಯಾಗಿದೆ ಎಂದು ಮೋದಿ ಹೇಳಿದರು.

ಅಗ್ಗದ ನವೀಕೃತ ಇಂಧನ, ತಂತ್ರಜ್ಞಾನಗಳು ಹಾಗೂ ಡಿಜಿಟಲ್ ಸಾಧನಗಳಿಂದಾಗಿ  ಬಳಕೆಯ ವಿಧಾನಗಳೂ ಬದಲಾಗುವ ಸೂಚನೆಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.

ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ದೇಶ ಸಾಕಷ್ಟು  ಉತ್ತಮ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಸಾಮಾಜಿಕ- ಆರ್ಥಿಕ ಬೆಳವಣಿಗೆಗೆ ಇಂಧನ ಪ್ರಮುಖ ಸಾಧನವಾಗಿದ್ದು, ಅದರ ಸಮರ್ಪಕ ನಿರ್ವಹಣೆಗೆ ತಮ್ಮ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ಹೇಳಿದರು.

ದೇಶಾದ್ಯಂತ ನೀಲಿಜ್ವಾಲೆ ಕ್ರಾಂತಿ ನಡೆಯುತ್ತಿದೆ. ಉಜ್ವಲಾ ಯೋಜನೆಯಡಿ ಕೇವಲ ಮೂರು ವರ್ಷಗಳಲ್ಲಿ 64 ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಕಳೆದ ಐದು ವರ್ಷಕ್ಕೂ ಮುನ್ನ ದೇಶದಲ್ಲಿ ಕೇವಲ ಶೇಕಡ 55ರಷ್ಟು ಎಲ್‍ಪಿಜಿ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಶೇಕಡ 90 ಜನರಿಗೆ  ಎಲ್‍ಪಿಜಿ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ತೈಲ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರದಾನ್ ಮಾತನಾಡಿ, ಇಂಧನ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ  ನ್ಯಾಯ ದೊರಕಿಸುವಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಉಜ್ವಲ ಯೋಜನೆಯಡಿ ಹಾಗೂ ನಗರ ಅನಿಲ ವಿತರಣಾ ಜಾಲ ವಿಸ್ತರಿಸುವ ಮೂಲಕ ಜನರಿಗೆ ಸ್ವಚ್ಛ ಅಡುಗೆ ಅನಿಲ ಒದಗಿಸಲಾಗಿದೆ ಎಂದು ಹೇಳಿದರು.

3 ದಿನಗಳ ಈ ದೈವಾರ್ಷಿಕ ಸಮ್ಮೇಳನ ಇಂಡೊ ಎಕ್ಸ್ ಪೆÇೀ ಮಾರ್ಟ್ ನಲ್ಲಿ ನಿನ್ನೆ ಆರಂಭಗೊಂಡಿದ್ದು, ಪಾಲುದಾರಿಕೆ ದೇಶಗಳ ಸುಮಾರು 95 ಇಂಧನ ಸಚಿವರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.