ರಾಜ್ಯಸಭೆಯಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ, ಪ್ರತಿಪಕ್ಷಗಳಿಂದ ರಾಜ್ಯಸಭೆಯಲ್ಲಿ ಗದ್ದಲ – ಕಲಾಪ ಮಧ್ಯಾಹ್ನ 2ರವರೆಗೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ, ಪ್ರತಿಪಕ್ಷಗಳು  ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಬೆಳಗ್ಗೆ ಸದನ ಸಮಾವೇಶಗೊಂಡ ಕೆಲವೇ ಕ್ಷಣಗಳಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಎಸ್‍ಪಿ  ಸಂಸದರು ಉತ್ತರ ಪ್ರದೇಶದಲ್ಲಿ ಕಳ್ಳಬಟ್ಟಿ ಸಾವಿನ ಪ್ರಕರಣ ಪ್ರಸ್ತಾಪಿಸಿ, ಚರ್ಚೆಗೆ  ಪಟ್ಟು ಹಿಡಿದರು.

ಆದರೆ, ಸಭಾಪತಿ ಎಂ. ವೆಂಕಯ್ಯ ನಾಯ್ಡು, ಆ ವಿಚಾರ ಚರ್ಚೆ ಅನುಮತಿಯನ್ನು  ನಿರಾಕರಿಸಿದರು. ಈ ನಡುವೆ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಂ ಅವರು, ಪರಿಶಿಷ್ಟ ಜಾತಿಗಳ ಸಂವಿಧಾನ  ಆದೇಶದ ಮೂರನೇ ತಿದ್ದುಪಡಿ ವಿಧೇಯಕ –2019ಅನ್ನು ಮಂಡಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಅನಿವಾಸಿ ಭಾರತೀಯರ ವಿವಾಹ ನೋಂದಣಿ ಮಸೂದೆ – 2019ಅನ್ನು  ಮಂಡಿಸಿದರು. ಕಾಂಗ್ರೆಸ್ ಸದಸ್ಯರು ಈ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿ, ಸದನದ ಬಾವಿಗೆ  ತೆರಳಿ ಪ್ರತಿಭಟನೆ ನಡೆಸಿದರು.

ಇದರ ನಡುವೆಯೇ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ಹೆಚ್ಚಿನ ಹಣಕಾಸು  ಒದಗಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು. ಇವೆಲ್ಲವುಗಳಿಂದ ಸದನದಲ್ಲಿ ಗದ್ದಲ ಹೆಚ್ಚಾದಾಗ ಸಭಾಪತಿ ಎಂ. ವೆಂಕಯ್ಯ ನಾಯ್ಡು  ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.