ಜೈಷ್-ಎ-ಮೊಹಮ್ಮದ್ ನಾಯಕ ಮಸೂದ್ ಅಜ಼ರ್ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಲಾಯಕ್ಕಾಗಿದ್ದಾನೆ – ವಿಶ್ವಸಂಸ್ಥೆಗೆ ಅಮೆರಿಕದ ಒತ್ತಾಯ.

ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜ಼ರ್ ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಪ್ರಕಟಿಸಲು ಎಲ್ಲ ರೀತಿಯಲ್ಲೂ ಲಾಯಕ್ಕಾಗಿದ್ದಾನೆ ಎಂದು ಅಮೆರಿಕ ಹೇಳಿದೆ. ವಾಷಿಂಗ್ಟನ್‌ನಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಗೃಹ ಇಲಾಖೆ ಉಪ ವಕ್ತಾರ ರಾಬರ್ಟ್ ಪಲ್ಲಾಡಿನೊ, ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿ ಪಾಲನೆಯ ನಿಟ್ಟಿನ ಪರಸ್ಪರ ಹಿತಾಸಕ್ತಿ ಹಿನ್ನೆಲೆಯಲ್ಲಿ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು. ಭಯೋತ್ಪಾದನೆ ಯತ್ನಗಳನ್ನು ತಡೆಗಟ್ಟಲು ಅಮೆರಿಕ ಮತ್ತು ಭಾರತ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ವಿಶ್ವಸಂಸ್ಥೆಯಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪಲ್ಲಾಡಿನೊ ಹೇಳಿದ್ದಾರೆ. ಜೈಷ್-ಎ-ಮೊಹಮ್ಮದ್ ಸಂಘಟನೆ ಹಾಗೂ ಅದರ ಸಂಸ್ಥಾಪಕರ ಬಗ್ಗೆ ಭಾರತ ಹಾಗೂ ಅಮೆರಿಕ ಸಮಾನ ದೃಷ್ಟಿಕೋನ ಹೊಂದಿವೆ ಎಂದು ಅವರು ಹೇಳಿದ್ದಾರೆ.