ಕರ್ತಾಪುರ್ ಕಾರಿಡಾರ್ ರೂಪುರೇಷೆ ಅಂತಿಮಗೊಳಿಸುವ ಕುರಿತು ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ

ಕರ್ತಾಪುರ್ ಕಾರಿಡಾರ್‌ನ ರೂಪುರೇಷೆ ಅಂತಿಮಗೊಳಿಸುವ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮೊದಲ ಸಭೆ ಇಂದು ಅಟ್ಟಾರಿ-ವಾಘಾ ಗಡಿಯಲ್ಲಿ ನಡೆಯಲಿದೆ. ಭಾರತ ಇಂದು ಕಾರಿಡಾರ್ ಮಾರ್ಗದ ಬಗ್ಗೆ ತಾಂತ್ರಿಕ ಮಟ್ಟದ ಮಾತುಕತೆಯನ್ನು ನಡೆಸಲು ಪ್ರಸ್ತಾಪಿಸಿದೆ.
ಈ ವರ್ಷದ ನವೆಂಬರ್‌ನಲ್ಲಿ ಇರುವ ಗುರುನಾನಕ್ ದೇವ್ ಅವರ ೫೫೦ನೇ ಜನ್ಮ ದಿನದ ಅಂಗವಾಗಿ ಕರ್ತಾಪುರ್ ಕಾರಿಡಾರ್ ಕಾರ‍್ಯಾರಂಭಗೊಳಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ.
ಈ ಮೂಲಕ ಪಾಕಿಸ್ತಾನದಲ್ಲಿರುವ ಪವಿತ್ರ ಗುರುದ್ವಾರಕ್ಕೆ ಸುಲಭ ಪ್ರವೇಶ ಕಲ್ಪಿಸಬೇಕೆನ್ನುವ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಗುರಿಯನ್ನೂ ಸಹ ಹೊಂದಲಾಗಿದೆ. ಭಾರತ ಕರ್ತಾಪುರ್ ಸಾಹೀಬ್ ಕಾರಿಡಾರ್ ಯೋಜನೆಗೆ ೫೦ ಎಕರೆ ಭೂಮಿಯನ್ನು ಈಗಾಗಲೇ ಗುರ್ತಿಸಿದೆ.
ಎರಡು ಹಂತಗಳಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ ಸಮುಚ್ಛಯವನ್ನು ನಿರ್ಮಿಸಲಾಗುವುದು, ಆ ಕಟ್ಟಡಗಳು ಹಸಿರು ಪರಿಸರವನ್ನು ಹೊಂದಿರಲಿವೆ ಮತ್ತು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿದ ಭಿತ್ತಿಚಿತ್ರಗಳನ್ನು ಹೊಂದಿರಲಿದೆ. ನವದೆಹಲಿ ಭಾರತದ ಕಡೆಯಿಂದ ಭದ್ರತೆಗೆ ಅಗ್ರ ಆದ್ಯತೆ ನೀಡಿದೆ. ಕರ್ತಾಪುರ್ ಸಾಹೀಬ್‌ಗೆ ಭಕ್ತರ ಭೇಟಿ ಕುರಿತಂತೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.