ಕರ್ತಾರ್‌ಪುರ್ ಕಾರಿಡಾರ್ ಸಂಬಂಧಿಸಿದಂತೆ ಚರ್ಚಿಸಲು ಭಾರತ-ಪಾಕಿಸ್ತಾನ ನಡುವೆ ಮೊದಲ ಸಭೆ ಆರಂಭ.

ಕರ್ತಾರ್‌ಪುರ್ ಕಾರಿಡಾರ್‌ನ ರೂಪುರೇಷೆ ಅಂತಿಮಗೊಳಿಸುವ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮೊದಲ ಸಭೆ ಇಂದು ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತದ ಕಡೆ ಆರಂಭವಾಗಿದೆ. ಕಾರಿಡಾರ್ ಮಾರ್ಗದ ಬಗ್ಗೆ ತಾಂತ್ರಿಕ ಮಟ್ಟದ ಮಾತುಕತೆಯನ್ನು ನಡೆಸುವ ಬಗ್ಗೆ ಭಾರತ ಪ್ರಸ್ತಾಪಿಸಲಿದೆ. ಉಭಯ ದೇಶಗಳ ನಿಯೋಗಗಳು ಇದಕ್ಕಾಗಿ ನಿನ್ನೆಯೇ ಅಮೃತ್‌ಸರ್ ತಲುಪಿವೆ. ಈ ವರ್ಷದ ನವೆಂಬರ್‌ನಲ್ಲಿ ಇರುವ ಗುರುನಾನಕ್ ದೇವ್ ಅವರ ೫೫೦ನೇ ಜನ್ಮದಿನದ ಅಂಗವಾಗಿ ಕರ್ತಾರ್‌ಪುರ್ ಕಾರಿಡಾರ್ ಕಾರ‍್ಯಾರಂಭಗೊಳಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗುತ್ತಿದೆ. ಪಾಕಿಸ್ತಾನದಲ್ಲಿರುವ ಈ ಪವಿತ್ರ ಗುರುದ್ವಾರಕ್ಕೆ ಸುಲಭ ಪ್ರವೇಶ ಕಲ್ಪಿಸಬೇಕೆನ್ನುವ ಸಿಖ್ ಧರ್ಮದ ಯಾತ್ರಿಕರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಗುರಿಯನ್ನೂ ಸಹ ಹೊಂದಲಾಗಿದೆ. ಭಾರತ ಕರ್ತಾರ್‌ಪುರ್ ಸಾಹೀಬ್ ಕಾರಿಡಾರ್ ಯೋಜನೆಗೆ ೫೦ ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಿದೆ. ಎರಡು ಹಂತಗಳಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ ಸಮುಚ್ಛಯವನ್ನು ನಿರ್ಮಿಸಲಾಗುವುದು, ಆ ಕಟ್ಟಡಗಳು ಹಸಿರು ಪರಿಸರದೊಂದಿಗೆ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿದ ಭಿತ್ತಿಚಿತ್ರಗಳನ್ನು ಹೊಂದಿರಲಿದೆ. ಭಾರತ ಸರ್ಕಾರ ಯಾತ್ರಿಕರ ಭದ್ರತೆಗೆ ಅಗ್ರ ಆದ್ಯತೆ ನೀಡಿದೆ. ಕರ್ತಾರ್‌ಪುರ್ ಸಾಹೀಬ್‌ಗೆ ಭಕ್ತರ ಭೇಟಿ ಕುರಿತಂತೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.