ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ಼ರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಚೀನಾದಿಂದ ಅಡ್ಡಿ.

ಭಾರತದ ನಾಗರಿಕರ ವಿರುದ್ಧ ಹೇಯ ದಾಳಿಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಸಂಘಟನೆಗಳ ನಾಯಕರನ್ನು ನ್ಯಾಯಕ್ಕೆ ಒಳಪಡಿಸಲು ಭಾರತ ಎಲ್ಲ ಸಾಧ್ಯವಾದ ಮಾರ್ಗಗಳಲ್ಲಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಆದರೆ ವಿಶ್ವಸಂಸ್ಥೆಯಿಂದ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವಕ್ಕೆ ಚೀನಾ ಮತ್ತೊಮ್ಮೆ ತಾಂತ್ರಿಕ ಅಡಚಣೆಯನ್ನು ಮುಂದಿಟ್ಟಿರುವುದಕ್ಕೆ ಭಾರತ ನಿನ್ನೆ ರಾತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರವರಿ ೧೪ರಂದು ನಡೆದ ಪುಲ್ವಾಮಾ ದಾಳಿಯ ಪ್ರಮುಖ ಹೊಣೆ ಹೊತ್ತಿರುವ ಜೈಷ್-ಇ-ಮೊಹಮ್ಮದ್ ನಾಯಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಂತಾರಾಷ್ಟ್ರೀಯ ಸಮುದಾಯ ಘೋಷಿಸಲು ಹಿನ್ನಡೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಪ್ರಸ್ತಾವವನ್ನು ಬೆಂಬಲಿಸಿರುವುದಕ್ಕೆ ಭಾರತ ಕೃತಜ್ಞತೆಗಳನ್ನು ಸಲ್ಲಿಸಿದೆ. ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳು ನಿರೀಕ್ಷೆಗೂ ಮೀರಿ ಪ್ರಸ್ತಾವವನ್ನು ಬೆಂಬಲಿಸಿವೆ ಎಂದು ಭಾರತ ಹೇಳಿದೆ.